ಮಡಿಕೇರಿ, ಸೆ.23 : ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಬರುವ ಭಕ್ತಾದಿಗüಳಿಗಾಗಿ ಸ್ಥಳೀಯರು ವಸತಿ ನಿಲಯಗಳನ್ನು ಕಲ್ಪಿಸಿ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿರುವ ಭಾಗಮಂಡಲ ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳು, ಸ್ಥಳೀಯರ ನಿತ್ಯ ಜೀವನಕ್ಕೆ ಯಾವುದೇ ರೀತಿಯ ಅಡ್ಡಿ ಎದುರಾದರೂ ಕಾನೂನಿನ ಮೂಲಕ ಹೋರಾಟ ನಡೆಸಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಕುದುಕುಳಿ ಭರತ್ ಹಾಗೂ ಪದಾಧಿಕಾರಿಗಳು ಹೋಂಸ್ಟೇಗಳನ್ನು ನಡೆಸಬಾರದು ಮತ್ತು ಅಂಗಡಿ, ಹೊಟೇಲ್‍ಗಳನ್ನು ತೆರೆದು ವ್ಯಾಪಾರ ಮಾಡಬಾರದೆನ್ನುವ ನಿಯಮ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಮಾತ್ರ ಯಾಕೆ ಅನ್ವಯ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಪ್ರತಿ ಊರು, ಊರುಗಳಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡುವ ದೇವಾಲಯಗಳಿವೆ. ಎಲ್ಲಾ ಪ್ರದೇಶಗಳಲ್ಲಿಯೂ ಹೋಂಸ್ಟೇ ಗಳಿವೆ, ಊಟದ ಮನೆಗಳಿವೆ ಮತ್ತು ಮಾಂಸಹಾರವೂ ನಡೆಯುತ್ತಿದೆ. ಆದರೆ ಭಕ್ತರ ಅನುಕೂಲಕ್ಕಾಗಿಯೇ ತಮ್ಮ ತಮ್ಮ ಸ್ವಂತ ಜಾಗ, ಮನೆಗಳಲ್ಲಿ ವ್ಯವಸ್ಥೆ ಕಲ್ಪಿಸುತ್ತಿರುವ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಇದೆಲ್ಲವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ವೆಂದರು.
ಕೇವಲ ದೇವಾಲಯಗಳಿದ್ದರೆ ಸಾಲದು, ಭಕ್ತರಿಗೆ ಪೂರಕವಾದ ವ್ಯವಸ್ಥೆಗಳು ಕೂಡ ಇರಬೇಕಾಗುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಸೂಕ್ತ ಬಂದೋಬಸ್ತ್
(ಮೊದಲ ಪುಟದಿಂದ) ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿ ಮಾಡಬೇಕಾಗುತ್ತದೆ ಎಂದು ಪ್ರಮುಖರು ತಿಳಿಸಿದರು.
ಹವಾಗುಣ ವೈಪರೀತ್ಯದಿಂದ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿರುವ ಸ್ಥಳೀಯ ರೈತರು ಜೀವನೋಪಾಯ ಕ್ಕಾಗಿ ಕೃಷಿಯೊಂದಿಗೆ ವ್ಯಾಪಾರವನ್ನು ಕೂಡ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಜಾತಿ, ಜನಾಂಗಗಳ ಭೇದವಿಲ್ಲ, ವಿನಾಕಾರಣ ಅಡ್ಡಿಪಡಿಸುವುದು ಸರಿಯಲ್ಲವೆಂದು ತಿಳಿಸಿರುವ ಅವರುಗಳು, ಸ್ಥಳೀಯರನ್ನು ಕಡೆಗಣಿಸಿ ತಲಕಾವೇರಿ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡರು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಆಗಸ್ಟ್ ತಿಂಗಳಿನಲ್ಲಿ ತಲಕಾವೇರಿ ಯಲ್ಲಿ ನಡೆದ ದುರಂತ ಮಾನವ ನಿರ್ಮಿತವೇ ಹೊರತು ಬೇರೆ ಯಾವುದೇ ಕಾರಣವಲ್ಲವೆಂದ ಭರತ್, ಬೇರೆ ಸಮಾಜದ ಅರ್ಚಕರನ್ನು ಪೂಜೆಗೆ ನೇಮಿಸಬೇಕೆಂಬ ವಾದ ಅರ್ಥಹೀನವಾಗಿದೆ ಎಂದು ಟೀಕಿಸಿದರು. ಈ ವಾದಕ್ಕೆ ಸ್ಥಳೀಯರ ವಿರೋಧವಿದೆ ಎಂದು ತಿಳಿಸಿದರು.
ಕೊಡಗು ರಾಜರ ಕಾಲದಲ್ಲಿ ತಲಕಾವೇರಿ, ಭಾಗಮಂಡಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಉಡುಪಿ, ಮಂಗಳೂರು ಮತ್ತು ಇಕ್ಕೇರಿ ಭಾಗಗಳಿಂದ ವೃತ್ತಿ ಪರಿಣಿತ ಅರ್ಚಕರನ್ನು ಕರೆಯಿಸಿಕೊಳ್ಳಲಾಗಿತ್ತು. ಇದು ನಡೆದು ಸುಮಾರು 300 ವರ್ಷಗಳೇ ಕಳೆದಿದ್ದು, ಈಗ ಅರ್ಚಕರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ವಂಶ ಪಾರಂಪರ್ಯ ಅರ್ಚಕ ಸ್ಥಾನವನ್ನು ಸ್ಥಳೀಯರು ಗೌರವಿಸುತ್ತೇವೆ ಮತ್ತು ಅರ್ಚಕ ಸಮುದಾಯಕ್ಕೆÉ ತೊಂದರೆಯಾದರೆ ಅವರನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ದಂಡಿನ ಕೆ.ಜಯಂತ್, ಕುಯ್ಯಮುಡಿ ಮನೋಜ್ ಕುಮಾರ್, ಪಟ್ಟಮಾಡ ಸಂಜು ಕಾವೇರಪ್ಪ ಹಾಗೂ ಕೆ.ತಮ್ಮಯ್ಯ ಉಪಸ್ಥಿತರಿದ್ದರು.