ಸೋಮವಾರಪೇಟೆ, ಸೆ. 23: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯದ 11 ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ತಾಲೂಕು ಯೋಜನಾ ಕಚೇರಿಯಲ್ಲಿ ನಡೆಯಿತು.

ಕಾರ್ಯಾಗಾರವನ್ನು ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಉದ್ಘಾಟಿಸಿ ಮಾತನಾಡಿ, ಪದಾಧಿಕಾರಿಗಳ ಜವಾಬ್ದಾರಿ ಒಕ್ಕೂಟದ ಧ್ಯೇಯೋದ್ದೇಶ, ಸಭೆ ನಡೆಸುವ ವಿಧಾನದ ಬಗ್ಗೆ ತರಬೇತಿ ನೀಡಿದರು.

ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಪದಾಧಿಕಾರಿಗಳು ವಾರದ ಸಭೆಯಲ್ಲಿ ಭಾಗವಹಿಸುವ ಉದ್ದೇಶಗಳ ಬಗ್ಗೆ ತಿಳಿಸಿದರು. ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಅವರು, ಪಾರದರ್ಶಕ ವ್ಯವಹಾರಕ್ಕೆ ದಾಖಲೀಕರಣದ ಮಹತ್ವ, ವಾರದ ಸಭೆ ಹಾಗೂ ಒಕ್ಕೂಟ ಸಭೆಗಳ ದಾಖಲಾತಿಗಳ ನಿರ್ವಹಣೆಯ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಜಿಲ್ಲಾ ಸಮನ್ವಯಾಧಿಕಾರಿ ಆನಂದ, ಯೋಜನೆಯಿಂದ ಸದಸ್ಯರಿಗೆ ನೀಡಲಾಗುವ ರೂ. 7 ಲಕ್ಷದವರೆಗಿನ ಜೀವ ಭದ್ರತಾ ವಿಮೆ ಹಾಗೂ ಆರ್ಥಿಕ ಸೇರ್ಪಡೆಯ ಮಹತ್ವದ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ವಲಯದ 55 ಮಂದಿ ಒಕ್ಕೂಟ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.