ಮಡಿಕೇರಿ, ಸೆ.23: “ಕಾಡಾನೆಗಳು ನೀರುಗುಂದ, ಮನಗನಗಳ್ಳಿ ಹಾಗೂ ಅಗ್ರಹಾರ ಸುತ್ತಮುತ್ತ ಸಂಚರಿಸುತ್ತಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 97- ನಂಬರ್ ಸಂಪರ್ಕಿಸಿ,” ಎಂಬ ಒಂದು ಎಸ್.ಎಂ.ಎಸ್ ಬಂದೊಡನೆ, ಗ್ರಾಮದವರು ಎಚ್ಚೆತ್ತುಕೊಂಡು ತಮ್ಮ ದಿನವನ್ನು ಈ ಸಂದೇಶಕ್ಕನುಗುಣವಾಗಿ ಯೋಜಿಸುತ್ತಾರೆ. ಆನೆ-ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಅಧಿಕÀಗೊಳ್ಳುತ್ತಿದ್ದು ಜನರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡುತ್ತಲೇ ಇದ್ದಾರೆ. ಆನೆಗಳ ಆವಾಸ ಸ್ಥಾನವಾದ ವನ್ಯಪ್ರದೇಶಗಳು ದಿನಂಪ್ರತಿ ಅವೈಜ್ಞಾನಿಕ ಯೋಜನೆಗಳಿಗೆ ಹಾಗೂ ಕೆಲವು ಹಿತಾಸಕ್ತರ ದುರಾಸೆಯಿಂದಾಗಿ ಅರಣ್ಯ ಅತಿಕ್ರಮಣಗೊಂಡು ಆನೆಗಳ ಪ್ರಾಣಹರಣವೇ ಶಾಶ್ವತ ಪರಿಹಾರವೇನೋ ಎಂಬಂತಹ ಜಿಜ್ಞಾಸೆ ಅನಿವಾರ್ಯವಾಗಿ ನೊಂದ ಅಮಾಯಕ ಕೃಷಿಕರಲ್ಲಿ ಸಹಜವಾಗಿಯೇ ಮೂಡುತ್ತಿದೆ. “ಕಾಡುಗಳು ನಶಿಸುತ್ತಿರುವದರಿಂದ, ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವೆಂದು ಏನನ್ನೂ ಕಂಡುಹಿಡಿಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ತಲುಪಿದೆ. ಆದರೆ, ಈ ಆನೆ-ಮಾನವ ಸಂಘರ್ಷಕ್ಕೆ ಕೆಲವು ಪರಿಹಾರ ಕ್ರಮಗಳನ್ನು ಖಂಡಿತವಾಗಿಯೂ ಕಂಡು ಹಿಡಿಯಬಹುದು,” ಎಂದು ‘ನೇಚರ್ ಕನ್‍ಸರ್ವೇಷನ್ ಫೌಂಡೇಷನ್’ನ ಸಂಶೋಧಕರಾದ ವಿನೋದ್ ಕುಮಾರ್ ಅÀವರು “ಶಕ್ತಿ” ಯೊಂದಿಗೆ ಅಭಿಪ್ರಾಯಪಟ್ಟರು..

ಕೊಡಗಿನಂತೆಯೇ ಹಾಸನ ಜಿಲ್ಲೆಯಲ್ಲಿಯೂ ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಬಾರದ ಸ್ಥಿತಿ ತಲುಪಿದಾಗÀ, 2014 ರಲ್ಲಿ 22 ಆನೆಗಳನ್ನು ಸರೆಹಿಡಿಯಲು ಕೇಂದ್ರಾಡಳಿತ ಅನುಮತಿ ನೀಡಿತು. ಈ ಸಮಯದಲ್ಲಿ, ಆನೆಗಳ ಈ ಸಾಮೂಹಿಕ ಸರೆಹಿಡಿಯುವಿಕೆ

(ಮೊದಲ ಪುಟದಿಂದ) ನಿಜವಾಗಿಯೂ ಸಂಘರ್ಷವನ್ನು ನಿಯಂತ್ರಿಸುವಲ್ಲಿ ಯಶಸ್ವಿ ಆಗುತ್ತದೆಯೇ? ಎಂಬುದನ್ನು ಸಂಶೋಧಿಸಲು 2015 ರಲ್ಲಿ ‘ನೇಚರ್ ಕನ್‍ಸರ್ವೇಷನ್ ಫೌಂಡೇಷನ್’ ಸಂಸ್ಥೆ ಹಾಸನ ಹಾಗೂ ಕೊಡಗಿನ ಕೊಡ್ಲಿಪೇಟೆಯಲ್ಲಿ ಕಾರ್ಯ ಯೋಜನೆ ರೂಪಿಸಿತು.“ಆನೆಗಳನ್ನು ಸೆರೆಹಿಡಿಯುವದರಿಂದ ಒಂದು ರೀತಿಯ ‘ಶೂನ್ಯ’ ಸೃಷ್ಟಿಯಾಗುತ್ತದೆ. ಈ ಖಾಲಿ ಜಾಗವನ್ನು ಬೇರೆ ಆನೆಗಳು ಭರಿಸುತ್ತವೆ...ಹೀಗೆ ಸಂಘರ್ಷ ಮುಂದುವರೆಯುತ್ತಲೇ ಹೋಗುತ್ತದೆ. ಈ ಸಂಘರ್ಷವನ್ನು ನಿಯಂತ್ರಣಕ್ಕೆ ತರಲು ನಾವು ‘ನೇಚರ್ ಕನ್‍ಸರ್ವೇೀಷನ್ ಫೌಂಡೇಷನ್’ನಲ್ಲಿ ಆನೆಗಳ ಪಥಚಲನ ಮಾರ್ಗವನ್ನು ಕಲೆಹಾಕಲು ಪ್ರಾರಂಭಿಸಿದೆವು. ಇದರ ಜೊತೆಗೆ, ಗ್ರಾಮಸ್ಥರೊಡನೆ ಚರ್ಚಿಸಿ ಆನೆಗಳ ವಾಸ್ತವ್ಯವನ್ನು ಗ್ರಾಮಸ್ಥರಿಗೆ ತಿಳಿಸಲು ಒಂದು ‘ಮಾಹಿತಿದಾರರ ಜಾಲಬಂಧ’ವನ್ನು ಹಾಸನ, ಸಕಲೇಶÀಪುರ ಹಾಗೂ ಕೊಡ್ಲಿಪೇಟೆಯಲ್ಲಿ ಪ್ರಾರಂಭಿಸಿದೆವು,” ಎಂದು ವಿನೋದ್ ವಿವರಿಸಿದರು.

ಕೊಡ್ಲಿಪೇಟೆಯ ಬೆಸೂರು, ನೀರುಗುಂದ ಹಾಗೂ ಶಿವಪುರದÀ ಗ್ರಾಮಸ್ಥರು ಸೇರಿದಂತೆ ಹಾಸನ ಹಾಗೂ ಸಕಲೇಶಪುರದ 250 ಗ್ರಾಮಗಳ 3700 ಗ್ರಾಮಸ್ಥರು ‘ನೇಚರ್ ಕನ್‍ಸರ್ವೇಷನ್ ಫೌಂಡೇಷನ್’ನ ಎಸ್.ಎಂ.ಎಸ್ ಹಾಗೂ ವಾಯಿಸ್ ಕಾಲ್ ಸೇವೆಗಳನ್ನು ಪಡೆದುಕೊಂಡಿದ್ದಾರೆ. “ಆನೆಗಳ ವಾಸ್ತವ್ಯದ ಬಗ್ಗೆ ಕನ್ನಡದಲ್ಲಿ ಎಸ್.ಎಂ.ಎಸ್ ಕಳುಹಿಸುತ್ತೇವೆ. ಇನ್ನು, ಓದಲು ಬರದವರಿಗೆ ‘ವಾಯಿಸ್ ಕಾಲ್’ ಮಾಡಲಾಗುವದು,” ಎಂದು ವಿನೋದ್ ವಿವರಿಸುತ್ತಾರೆ. ಇದಲ್ಲದೆ, ಆನೆಗಳ ಓಡಾಟ ಹೆಚ್ಚಿರುವ ಆಪತ್ತಿನ ಪ್ರದೇಶಗಳಲ್ಲಿ ‘ಡಿಜಿಟಲ್’ ಪ್ರದರ್ಶನ ಫಲಕಗಳನ್ನು ಅಳವಡಿಸಲಾಗಿದ್ದು, ಆನೆಗಳ ವಾಸ್ತವ್ಯವನ್ನು ತಿಳಿಸುತ್ತವೆ. ಇನ್ನು, ಅನೇಕ ಕಡೆಗಳಲ್ಲಿ ‘ಫ್ಯ್ಲಾಷ್‍ಲೈಟ್’(ಬೆಳಕಿನ ಜಾಗೃತಿ) ಸೌಲಭ್ಯಗಳನ್ನೂ ಅಳವಡಿಸಲಾಗಿದೆ. “ಈ ಫ್ಯ್ಲಾಷ್‍ಲೈಟ್‍ಗಳಿಗೆ ಸಿಮ್‍ಕಾರ್ಡ್‍ಗಳನ್ನು ಅಳವಡಿಸಲಾಗಿದ್ದು, ಆನೆಗಳು ಗ್ರಾಮದತ್ತ ತೆರಳುವದನ್ನು ಟ್ರ್ಯಾಕ್‍ಮಾಡುವ ನಮ್ಮ ಸಂಸ್ಥೆಯ ಸಹಾಯಕರು ತಕ್ಷಣ ಸಿಮ್‍ಕಾರ್ಡ್‍ಗೆ ಕರೆ ನೀಡಿದಾಗ ಫ್ಯ್ಲಾಷ್‍ಲೈಟ್ ಆನ್ ಆಗುತ್ತವೆ. ಇದರಿಂದ ಗ್ರಾಮಸ್ಥರು ಎಚ್ಚೆತ್ತುಕೊಳ್ಳುತ್ತಾರೆ,” ಎಂದು ಮಾಹಿತಿಯಿತ್ತರು.

ಕೊಡಗಿನ ಬೆಸೂರು ಗ್ರಾಮದಲ್ಲಿ ಒಂದು ‘ಡಿಜಿಟಲ್’ ಪ್ರದರ್ಶನ ಫಲಕ ಸೇರಿದಂತೆ ಈ ಸಂಸ್ಥೆಯು ಹಾಸನ ಹಾಗೂ ಸಕಲೇಶಪುರ ಪ್ರದೇಶಗಳಲ್ಲಿ ಒಟ್ಟು 9 ಫಲಕಗಳನ್ನು ಅಳವಡಿಸಿದೆ. ಅಲ್ಲದೆ, ಕೊಡಗಿನ ನೀರುಗುಂದ, ಶಿವಪುರ ಹಾಗೂ ಅಗಾಲಿ ಗ್ರಾಮಗಳಲ್ಲಿ ಮೂರು ಫ್ಯ್ಲಾಷ್‍ಲೈಟ್‍ಗಳನ್ನು ಸೇರಿಸಿ ಒಟ್ಟು 12 ಲೈಟ್‍ಗಳನ್ನು ಅಳವಡಿಸಿದೆ. ಕೊಡಗಿನ ಕೊಡ್ಲಿಪೇಟೆಯಲ್ಲಿ ಇವರ ಸೇವೆಯನ್ನು ಸುಮಾರು 500 ಚಂದಾದಾರರು ಪಡೆಯುತ್ತಿದ್ದು, ಆನೆ-ಮಾನವ ಸಂಘರ್ಷವನ್ನು ತಡೆಯುವಲ್ಲಿ ವೈಜ್ಞಾನಿಕ ಹಾದಿಯನ್ನು ರೂಪಿಸುತ್ತಿದ್ದಾರೆ. “ನಮ್ಮ ಸಂಸ್ಥೆಯ ಸ್ವಯಂಸೇವಕರು ಅಲ್ಲದೆ, ಅರಣ್ಯ ಇಲಾಖೆಯ ಕಾರ್ಯಕರ್ತರೂ ಕೂಡ ನಮ್ಮೊಡನೆ ಆನೆಗಳ ಟ್ರ್ಯಾಕಿಂಗ್ ಕಾರ್ಯದಲ್ಲಿ ಸಹಾಯ ಮಾಡುತ್ತಾರೆ. ಇದಲ್ಲದೆ, ಗ್ರಾಮಸ್ಥರು, ರೈತರು ಹಾಗೂ ಬೆಳೆಗಾರರೂ ಕೂಡ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ವಿನೋದ್ ನುಡಿದರು. ಇವರ ಈ ವೈಜ್ಞಾನಿಕ ಸೇವೆಯನ್ನು ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿರುವ ಎಲ್ಲಾ ಪ್ರದೇಶಗಳಲ್ಲಿ ಪ್ರಾರಂಭಿಸಲು ಇಚ್ಛಿಸುವರಾದರೂ, ಇದಕ್ಕೆ ಬೇಕಾದ ನಿಧಿ ಸಂಗ್ರಹಣೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಅವರು ಮುಕ್ತ ನುಡಿಯಾಡಿದರು. -ಪ್ರಜ್ಞಾ ಜಿ.ಆರ್.