ಗೋಣಿಕೊಪ್ಪಲು, ಸೆ. 23: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಗೋಣಿಕೊಪ್ಪ ಪೊಲೀಸರು ಪತ್ತೆ ಹಚ್ಚಿ ಮೂಲತಃ ಸಕಲೇಶಪುರದ ಮಾಗಲು ಗ್ರಾಮದ ಆರೋಪಿ ಮಹಮ್ಮದ್ ಸುಲೈಮಾನ್ (29) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಗೋಣಿಕೊಪ್ಪ ಪ್ರಭಾರ ಉಪ ನಿರೀಕ್ಷಕ ಡಿ.ಕುಮಾರ್ ಮುಂದಾಳತ್ವದಲ್ಲಿ ಗಸ್ತು ಕಾರ್ಯ ನಡೆಸುತ್ತಿದ್ದ ಸಂದರ್ಭ (ಕೆ.ಎ.09ಎಂ. 6155)ರ ಮಾರುತಿ 800 ಕಾರಿನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾವನ್ನು ಬೇರೆ ಕಡೆಯಿಂದ ತೆಗೆದುಕೊಂಡು ಗೋಣಿಕೊಪ್ಪ ಕಡೆಯಿಂದ ಕೈಕೇರಿ ಕಡೆಗೆ ತೆರಳುತ್ತಿದ್ದ ಸಂದರ್ಭ ಸುಲೈಮಾನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪ್ರಸ್ತುತ ಕೈಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸ ಇರುವ ಈತ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಇದೀಗ ಪೊಲೀಸರು ಕಾರು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಕಾರ್ಯ ಚರಣೆಯಲ್ಲಿ ಎಎಸ್ಐ ಮೇದಪ್ಪ, ಎಎಸ್ಐ ಸುಬ್ರಮಣಿ, ಸಿಬ್ಬಂದಿ ಗಳಾದ ಮಣಿಕಂಠ, ಹೆಚ್.ಕೆ.ಕೃಷ್ಣ, ಪಾಲ್ಗೊಂಡಿದ್ದರು.