ಗೋಣಿಕೊಪ್ಪಲು, ಸೆ.22: ಅಮ್ಮತ್ತಿ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸೂರು ಗ್ರಾಮದ ಪೂದ್ರಿಮಾಡ ಹಾಗೂ ಪಂದ್ಯಂಡ ಕುಟುಂಬಸ್ಥರು ನೂರಾರು ಎಕರೆ ಭತ್ತದ ಗದ್ದೆಯನ್ನು ಹದಗೊಳಿಸಿ ಬೆಳೆದ ಬೆಳೆ ಫಲ ಕೊಡುವ ವೇಳೆಗೆ ಕಳೆದ ನಾಲ್ಕು ದಿನಗಳಿಂದ ಕಾಡಾನೆಯ ಹಿಂಡು ಭತ್ತದ ಗದ್ದೆಯಲ್ಲಿ ಬೆಳೆದು ನಿಂತಿದ್ದ ಪೈರನ್ನು ಸಂಪೂರ್ಣ ದ್ವಂಸಗೊಳಿಸಿ ಹಾಳು ಗೆಡವಿವೆ. ಅಲ್ಲದೆ ಗದ್ದೆಯ ಸಮೀಪವಿರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟ ಈ ಕಾಡಾನೆಯ ಹಿಂಡು ತೋಟದಲ್ಲಿರುವ ಕಾಫಿ, ಕರಿಮೆಣಸು,ಅಡಿಕೆ,ಬಾಳೆ, ಹಾಗೂ ತೆಂಗು ಗಿಡಗಳನ್ನು ದ್ವಂಸಗೊಳಿಸಿದೆ. ಇಲ್ಲಿನ ಗ್ರಾಮಸ್ಥರು ಕಾಡಾನೆಯಿಂದ ತೊಂದರೆಗೀಡಾಗಿ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡಾನೆಗಳು ದಾಳಿ ನಡೆಸಿದ ಸಂದರ್ಭ ನೆಪ ಮಾತ್ರಕ್ಕೆ ಆಗಮಿಸುವ ಅರಣ್ಯ ಇಲಾಖೆಯ ಕಿರಿಯ ಸಿಬ್ಬಂದಿಗಳು ಆಗಮಿಸಿ ತೆರಳುತ್ತಿದ್ದಾರೆಯೇ ವಿನಾಃ ಕಾಡಾನೆ ಓಡಿಸುವ ಕುರಿತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಆಕ್ರೋಶಗೊಂಡ ಈ ಭಾಗದ ರೈತರು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ವೀರಾಜಪೇಟೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಯ ಮುಂದೆ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಗ್ರಾಮದ ಹಿರಿಯರಾದ ಪೂದ್ರಿಮಾಡ ಬೋಪಣ್ಣ ಮಾತನಾಡಿ ಕಾಡಾನೆಯ ದಾಳಿಯಿಂದ ತಪ್ಪಿಸಿಕೊಳ್ಳುವ ಸಂದರ್ಭ ತನ್ನ ಬಲಗಾಲು ಗಂಭೀರ ಗಾಯಗೊಂಡು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಆದರೆ ಇಲಾಖೆ ಮಾತ್ರ ತನ್ನ ಜಾಣ ಮೌನವನ್ನು ಮುಂದುವರೆಸುತ್ತಿದೆ. ರೈತರು ವರ್ಷವಿಡೀ ಕಷ್ಟ ಪಟ್ಟು ಬೆಳೆಯುವ ಫಸಲುಗಳು ಕೈ ಸೇರುವ ಸಂದರ್ಭ ಕಾಡಾನೆಗಳ ಪಾಲಾಗುತ್ತಿವೆ. ಇದರಿಂದ ರೈತ ತಾಳ್ಮೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪೂದ್ರಿಮಾಡ ಗಗನ್ ಮಾತನಾಡಿ ಹಿರಿಯರು ಕಾಪಾಡಿಕೊಂಡು ಬಂದಿರುವ ಭತ್ತದ ಗದ್ದೆಗಳಲ್ಲಿ ನಾವುಗಳು ಪ್ರತಿ ವರ್ಷ ಕೃಷಿ ಮಾಡಿ ಭತ್ತ ಬೆಳೆಯುತ್ತಿದ್ದೇವೆ. ಭತ್ತದ ಫಸಲನ್ನು ರಕ್ಷಿಸಿಕೊಳ್ಳಲು ಅರಣ್ಯ ಇಲಾಖೆಯು ಸೋಲಾರ್ ಬೇಲಿ ನಿರ್ಮಿಸಿ ಎಂದು ಸಲಹೆ ನೀಡುತ್ತದೆ. ಆದರೆ ಸೋಲಾರ್ ಬೇಲಿ ನಿರ್ಮಾಣಕ್ಕೆ ರೈತರ ಬಳಿ ಹಣವಿಲ್ಲ. ಕಾಡಾನೆಗಳ ಉಪಟಳವನ್ನು ನಿಲ್ಲಿಸಲು ಅರಣ್ಯ ಇಲಾಖೆ ಮುಂದಾಗಲೇಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರಲು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದರು.

ಈ ಸಂದರ್ಭ ಪೂದ್ರಿಮಾಡ ಕುಟುಂಬಸ್ಥರಾದ ನೀಲ್ ಗಣಪತಿ, ಗಂಗಾಗಣಪತಿ, ಬೋಪಣ್ಣ, ಬಿದ್ದಪ್ಪ, ಗಗನ್, ಲಾಲುಗಣಪತಿ, ಸನ್ನಿ ಅಯ್ಯಪ್ಪ, ತಮ್ಮಯ್ಯ, ಸನ್ನು ಸೋಮಯ್ಯ, ಪಂದ್ಯಂಡ ಕುಟುಂಬಸ್ಥರಾದ ಪಿ.ಬಿ.ಕರುಂಬಯ್ಯ, ಮನು ಸೋಮಯ್ಯ, ಸುನೀಲ್, ಸೇರಿದಂತೆ ಮುಂತಾದವರು ಹಾಜರಿದ್ದರು.