ಮಡಿಕೇರಿ: ಅಣಕು ಪರೀಕ್ಷೆಗಳು ಬರೆದರೆ, ಅಂತಿಮ ಪರೀಕ್ಷೆ ಬಹಳ ಸುಲಭ ಎನಿಸ ಲಿದ್ದು, ಉಳಿದ ಪರೀಕ್ಷೆಗಳಂತೆ ಅನಿಸುತ್ತದೆ ಎಂದು ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದ ಆರ್ನವ್ ಅಯ್ಯಪ್ಪ ಅನಿಸಿಕೆ. ಮಡಿಕೇರಿಯ ವಕೀಲ ಪಾಸುರ ಪ್ರೀತಮ್ - ಹೇಮಾ ದಂಪತಿಯ ಪುತ್ರ ಆರ್ನವ್ ಸಿ.ಇ.ಟಿ.ಯ ‘ಯೋಗಿಕ್ ಸೈನ್ಸ್ ಆ್ಯಂಡ್ ನ್ಯಾಚುರೋಪತಿ’ ವಿಭಾಗದಲ್ಲಿ ರಾಜ್ಯಕ್ಕೆ ಮೊದಲನೆ ರ್ಯಾಂಕ್, ‘ಅಗ್ರಿಕಲ್ಚರ್ ಬಿಎಸ್.ಸಿ. ಅಲ್ಲಿ 4ನೇ ರ್ಯಾಂಕ್, ‘ವೆಟರ್ನರಿಯಲ್ಲಿ 5ನೇ ರ್ಯಾಂಕ್’, ‘ಫಾರ್ಮಾದಲ್ಲಿ 7ನೇ ರ್ಯಾಂಕ್’ ಹಾಗೂ ‘ಇಂಜಿನಿಯರಿಂಗ್’ ನಲ್ಲಿ 81ನೇ ರ್ಯಾಂಕ್ ಪಡೆದಿದ್ದಾನೆ. ‘ಎಮ್.ಬಿ.ಬಿ.ಎಸ್’ ಸಂಬಂಧ ನೀಟ್ ಪರೀಕ್ಷೆ ಬರೆದದ್ದು ಅದರಲ್ಲಿಯು ಉತ್ತಮ ರ್ಯಾಂಕ್ ಪಡೆಯುವ ವಿಶ್ವಾಸ ಆರ್ನವ್ ಹೊಂದಿದ್ದಾನೆ.
ಆರ್ನವ್ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ 1ನೇ ತರಗತಿಯಿಂದ 6ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ನಂತರ 10ನೇ ತರಗತಿಯವರೆಗೆ ಕೊಡಗು ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ, ಪಿ.ಯು. ವಿದ್ಯಾಭ್ಯಾಸವನ್ನು ಮೂಡ ಬಿದರೆಯ ಆಳ್ವಾಸ್ನಲ್ಲಿ ಮುಗಿಸಿದ್ದಾನೆ.
ಉತ್ತಮ ರ್ಯಾಂಕ್ ಪಡೆದ ಕುರಿತು ‘ಶಕ್ತಿ’ ಆರ್ನವ್ ಅಭಿಪ್ರಾಯ ಬಯಸಿದಾಗ ಅಣಕು ಪರೀಕ್ಷೆಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದನು. ತಾನು ಅಂತಿಮ ಸಿ.ಇ.ಟಿ. ಪರೀಕ್ಷೆ ಬರೆಯುವ ಮುನ್ನ 100 ರಿಂದ 200 ಅಣಕು ಪರೀಕ್ಷೆಗಳನ್ನು ಬರೆದಿದ್ದು ಕೊನೆಗೆ ಅಂತಿಮ ಪರೀಕ್ಷೆ ಬರೆಯುವಾಗ, ಯಾವುದೇ ಭಯವಿಲ್ಲದೆ ಇದು ಮತ್ತೊಂದು ಪರೀಕ್ಷೆ ಅಷ್ಟೆ ಎಂಬಂತೆ ಅನಿಸುತ್ತಿತ್ತು. ಆದ್ದರಿಂದ ಹೆದರಿಕೆಯಿಲ್ಲದೆ ಪರೀಕ್ಷೆ ಎದುರಿಸಲು ಸಹಾಯವಾಯಿತು ಎಂದು ಅಭಿಪ್ರಾಯಿಸಿದನು.
ಅಣಕು ಪರೀಕ್ಷೆ ಕಾಲೇಜಿನಲ್ಲೇ ನಡೆಸಲಾಗುತ್ತಿದ್ದು, ಶಿಕ್ಷಕರ ಸಹಾಯದಿಂದ ಅಂತಿಮ ಪರೀಕ್ಷೆಯ ವಾತಾವರಣವನ್ನು ಸೃಷ್ಟಿಸಲಾಗುತ್ತಿತ್ತು ಎಂದು ಆರ್ನವ್ ಹೇಳುತ್ತಾನೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ
ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸಬೇಕಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಅತೀಮುಖ್ಯ. ಪಿ.ಯು. ಪಠ್ಯಕ್ರಮಕ್ಕಿಂತ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಹೆಚ್ಚು ಸಮಯ ನಿಗದಿಸಿದರೆ ಒಳ್ಳೆಯದು.
ಪಿ.ಯು. ಪರೀಕ್ಷೆಯಲ್ಲಿ ಸಾಧಾರಣವಾಗಿ ಫಲಿತಾಂಶ ಬಂದರು ತೊಂದರೆಯಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದರೆ ಮುಂದಿನ ಭವಿಷ್ಯಕ್ಕೆ ಬಹಳ ಸಹಾಯವಾಗುತ್ತದೆ ಎಂಬುದು ಆರ್ನವ್ ಅಭಿಪ್ರಾಯ.
2 ವರ್ಷಗಳ ಸತತ ಪರಿಶ್ರಮ ಮುಂದಿನ 40 ವರ್ಷಗಳ ತನಕ ಪರಿಣಾಮ
2 ವರ್ಷಗಳ ಕಾಲ ಏಕಾಗ್ರತೆ ಯಿಂದ ಫೋನ್, ಟಿ.ವಿ. ಇತರ ಎಲ್ಲ ಅನವಶ್ಯಕ ಚಟುವಟಿಕೆಗಳನ್ನು ತೊರೆದರೆ ಮುಂಬರುವ 40 ವರ್ಷಗಳ ಜೀವನಕ್ಕೆ ಸಹಾಯವಾಗುತ್ತದೆ. ಪರೀಕ್ಷೆಗಳಲ್ಲಿ ಅತ್ಯುತ್ತಮ ರ್ಯಾಂಕ್ ಪಡೆಯಲು ಸಾಧ್ಯವಾಗಲಿದೆ ಎಂಬುದು ಆರ್ನವ್ ಅನಿಸಿಕೆ.
ಶಿಕ್ಷಕರು, ಪೋಷಕರ, ಅಕ್ಕನ ಸಹಾಯ
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಭವೀ ಶಿಕ್ಷಕರು ಕಾಲೇಜಿಗೆ ಆಗಮಿಸಿ ಬೋಧನೆ ನೀಡುತ್ತಿದ್ದರು. ಇದರೊಂದಿಗೆ ಪೋಷಕರು ವಿಶ್ವಾಸ ತುಂಬಿಸುತ್ತಿದ್ದರು. ಮುಖ್ಯವಾಗಿ ಅಕ್ಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾದರಿಯಾಗಿದ್ದಳು. ಅಕ್ಕ ಕೂಡ ಈ ಹಿಂದೆ ಸಿ.ಪಿ.ಟಿ. ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದಿದ್ದು ಅವರ ಮಾರ್ಗದರ್ಶನವನ್ನು ಸ್ಮರಿಸಿಕೊಂಡನು.