ಮಡಿಕೇರಿ: ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಆಲಿಸಿದರೆ ಪುನಃ ಆ ವಿಷಯದ ಕುರಿತು ಹೆಚ್ಚಾಗಿ ಓದಿ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಿ.ಇ.ಟಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಉತ್ತಮ ಸ್ಥಾನ ಪಡೆದ ಶಶಾಂಕ್ ‘ಶಕ್ತಿ’ಯೊಂದಿಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ. ಶಶಾಂಕ್ ಜಿಲ್ಲೆಯ ಅಶ್ವಿನಿ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಕುಲಕರ್ಣಿ ಹಾಗೂ ಡಾ. ಅರುಣಾ ದಂಪತಿಯ ಪುತ್ರ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಮಡಿಕೇರಿಯ ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಶಾಂಕ್ ಪಿ.ಯು. ಶಿಕ್ಷಣವನ್ನು ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪೂರ್ಣ ಗೊಳಿಸಿದ್ದಾನೆ. ಇತ್ತೀಚೆಗೆ ಪ್ರಕಟ ಗೊಂಡ ಸಿ.ಇ.ಟಿ. ಪರೀಕ್ಷೆ ಫಲಿತಾಂಶ ದಲ್ಲಿ ಇಂಜಿನಿಯರಿಂಗ್ನಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ ದಲ್ಲಿ 25ನೇ ರ್ಯಾಂಕ್ ಪಡೆದಿದ್ದಾನೆ. ಮುಂದು ವರೆದು ಟ್ರಿಪಲ್ ಐಟಿ (IIIಖಿ) ಅಲ್ಲಿ 47ನೇ ರ್ಯಾಂಕ್, ಕಾಮೆಡ್-ಕೆ ನಲ್ಲಿ 18ನೇ ರ್ಯಾಂಕ್, ಮಣಿಪಾಲ್ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಪಡೆದುಕೊಂಡಿದ್ದಾನೆ. ಜೆ.ಇ.ಇ. ಎಡ್ವಾನ್ಸ್ ಪರೀಕ್ಷೆಗೆ ಕೂಡ ಆಯ್ಕೆಯಾಗಿದ್ದಾನೆ.
ಪಿ.ಯು. ಪರೀಕ್ಷೆ ಹಾಗೂ ಸಿಇಟಿಗೆ ಪ್ರತ್ಯೇಕವಾಗಿ ಓದುವ ಅಗತ್ಯವಿಲ್ಲ
ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ಶಶಾಂಕ್ ಅನ್ನು ‘ಶಕ್ತಿ’ ಅಭಿಪ್ರಾಯ ಬಯಸಿದಾಗ ಪಿ.ಯು ಪಠ್ಯಕ್ರಮ ಸಂಬಂಧ ಓದುವುದ ರೊಂದಿಗೆ ಸಿ.ಇ.ಟಿ. ಪರೀಕ್ಷೆಯ ಸಿದ್ಧತೆ ಒಂದೇ ಸಮನೆ ಆಗುತ್ತಿದ್ದುದ್ದಾಗಿ ಹೇಳಿದನು. ಪಿ.ಯು. ಪಠ್ಯ ಕ್ರಮದ ಬಹಳಷ್ಟು ವಿಷಯಗಳು ಸಿ.ಇ.ಟಿ. ಪರೀಕ್ಷೆಯಲ್ಲಿ ಕೂಡ ಇರುವುದರಿಂದ ಪಿ.ಯು. ಪಠ್ಯಕ್ರಮ ಕೂಡ ಅತೀ ಮುಖ್ಯವಾಗಿರುವುದಾಗಿ ಶಶಾಂಕ್ ಹೇಳುತ್ತಾನೆ.
ಅಣಕು ಪರೀಕ್ಷೆ ಅತೀ ಮುಖ್ಯ
ಅಂತಿಮ ಪರೀಕ್ಷೆ ಆಗಮಿಸುವ ಮುನ್ನ ಅನೇಕ ಅಣಕು ಪರೀಕ್ಷೆಗಳು ಬರೆದರೆ ಅಂತಿಮ ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಎದುರಿಸಬಹು ದೆಂಬುದು ಶಶಾಂಕ್ನ ಅಭಿಪ್ರಾಯ.
ಆದಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಿರಿ
ಸಿ.ಇ.ಟಿ. ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ರ್ಯಾಂಕ್ ಪಡೆದ ಶಶಾಂಕ್ ಒಂದೇ ಪರೀಕ್ಷೆಗೆ ಸೀಮಿತವಾಗದಂತೆ ಇತರ ಪರೀಕ್ಷೆಗಳನ್ನು ಬರೆಯಬೇಕಾಗಿ ಅಭಿಪ್ರಾಯಿಸುತ್ತಾನೆ.
ಬೇರೆಯವರು ಹೇಳಿದ್ದು ಗ್ರಹಿಸಬೇಡಿ
ಪರೀಕ್ಷೆಗೂ ಮುನ್ನ ಸಹಜವಾಗಿ ಎಷ್ಟೇ ಓದಿದ್ದರು ಭಯ ಇರುತ್ತದೆ. ಇದನ್ನು ಮತ್ತಷ್ಟು ಹೆಚ್ಚಿಸುವಂತೆ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಶುರುವಾಗುವ ಮುನ್ನ ಸಹಪಾಠಿಗಳು, ಗೆಳೆಯರು ‘ಈ ಪ್ರಶ್ನೆಗೆ ಉತ್ತರ ಗೊತ್ತ, ಇದು ಓದಿದಿಯಾ, ಅದು ಓದಿದಿಯಾ’ ಎಂಬುದನ್ನೆಲ್ಲ ಕೇಳಿ ಆತಂಕ ಹೆಚ್ಚಿಸುತ್ತಾರೆ. ಇವು ಯಾವುದಕ್ಕೂ ಕಿವಿ ಕೊಡದೆ ಮೌನವಾಗಿದ್ದರೆ ಪರೀಕ್ಷೆ ಸಂದರ್ಭ ಯಾವ ಭಯ ಕೂಡ ಇರುವುದಿಲ್ಲ ಎನ್ನುತ್ತಾನೆ ಶಶಾಂಕ್.
ನಿದ್ದೆಗೆಡುವ ಅವಶ್ಯಕತೆ ಇಲ್ಲ
ಪರೀಕ್ಷೆಯ ಹಿಂದಿನ ದಿನ ನಿದ್ದೆಗೆಟ್ಟು ಓದುವ ಅವಶ್ಯಕತೆ ಇಲ್ಲ. ಸ್ವಲ್ಪ ದಿನಗಳ ಹಿಂದೆಯೇ ಓದಿ ತಯಾರಾಗಿದ್ದರೆ ಪರೀಕ್ಷೆಯ ಹಿಂದಿನ ದಿನ ಸ್ವಲ್ಪ ಬೇಗ ಮಲಗಬಹುದು. ಇದರಿಂದ ನೆಮ್ಮದಿಯ ಮನಸ್ಸಿನಿಂದ ಪರೀಕ್ಷೆ ಬರೆಯ ಬಹುದೆಂದು ಶಶಾಂಕ್ ಹೇಳುತ್ತಾನೆ.
ಶಿಕ್ಷಕರ - ಪೋಷಕರ ಪಾತ್ರ ಅಪಾರ
ಎಕ್ಸ್ಪರ್ಟ್ ಕಾಲೇಜಿನ ಶಿಕ್ಷಕರ ಸಹಾಯ ಅತ್ಯುತ್ತಮ ರ್ಯಾಂಕ್ ಪಡೆಯಲು ಕಾರಣವಾಯಿತು. ಬೆಳಿಗ್ಗೆ 7 ಗಂಟೆಯಿಂದ ಹಿಡಿದು ಸಂಜೆ 7 ರವರೆಗೂ ಕಾಲೇಜು ನಡೆಯುತ್ತಿತ್ತಾದರು ಈ ಮಧ್ಯೆ ವಿರಾಮಗಳು ಬಹಳಷ್ಟು ಸಿಗುತ್ತಿತ್ತು. ಯಾವುದೇ ಕಾರಣಕ್ಕು ಒತ್ತಡ ಇರಲಿಲ್ಲ. ಪೋಷಕರು ಕೂಡ ಯಾವುದೇ ಒತ್ತಡ ಹೇರುತ್ತಿರಲಿಲ್ಲ. ವಿಶ್ವಾಸ ತುಂಬಿಸುತ್ತಿದ್ದರು. ಆದುದರಿಂದ ಸಾಧನೆ ಮಾಡಲು ಸಾಧ್ಯವಾಯಿತು.