ರಾಜ್ಯಸಭೆಯಲ್ಲಿ 6 ಮಸೂದೆ ಮಂಡನೆ

ನವದೆಹಲಿ, ಸೆ. 22: ಪ್ರತಿಪಕ್ಷಗಳ ಕಲಾಪ ಬಹಿಷ್ಕರಿಸಿದ್ದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ಮಂಗಳವಾರ ಮೂರು ಗಂಟೆಯಲ್ಲೇ ದಾಖಲೆಯ ಬರೋಬ್ಬರಿ ಆರು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದೆ. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮಸೂದೆ 2020, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020, ಕಂಪೆನಿಗಳ (ತಿದ್ದುಪಡಿ) ಮಸೂದೆ 2020, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020, ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ 2020 ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿ (ತಿದ್ದುಪಡಿ) ಮಸೂದೆ 2020 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟನೆ

ಬೆಂಗಳೂರು, ಸೆ. 22: ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಅಪರೂಪದ ಘಟನೆ ಮಂಗಳವಾರ ವಿಧಾನ ಪರಿಷತ್‍ನಲ್ಲಿ ನಡೆಯಿತು. ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಷಯ ಕುರಿತು ಪ್ರಸ್ತಾಪ ಮಾಡಿದ ಆಡಳಿತಾರೂಢ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸರ್ಕಾರಿ ಪದವಿ ಕಾಲೇಜಿನಲ್ಲಿ ಶೇ. 70 ರಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಮಾರ್ಚ್‍ನಿಂದ ಅವರಿಗೆ ವೇತನವನ್ನೇ ಕೊಟ್ಟಿಲ್ಲ. ಸರ್ಕಾರವನ್ನು ಕೇಳಿದರೆ ಅವರನ್ನು 10 ತಿಂಗಳಿಗೆ ಗುತ್ತಿಗೆ ಮೇಲೆ ನೇಮಕಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಸರ್ಕಾರದ್ದೇ ಸುತ್ತೋಲೆ ಇದೆ. ಕೋವಿಡ್ ಸಮಯದಲ್ಲಿ ವೇತನ ಕಡಿತ ಮಾಡಬಾರದೆಂಬ ಸೂಚನೆಯನ್ನು ಸರ್ಕಾರವೇ ನೀಡಿದೆ. ಆದರೂ ಉಪನ್ಯಾಸಕರಿಗೆ ವೇತನ ನೀಡಿಲ್ಲ. ಈವರೆಗೂ ಲಾಸ್ಟ್ ವರ್ಕಿಂಗ್ ಡೇ ಘೋಷಣೆ ಮಾಡಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ

ಧಾರಾವಾಹಿ ಕಲಾವಿದರ ವಿಚಾರಣೆ

ಬೆಂಗಳೂರು, ಸೆ. 22: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್ ಹಾಗೂ ಗಟ್ಟಿಮೇಳ ಧಾರಾವಾಹಿಯ ಅಭಿಷೇಕ್‍ಗೆ ನೋಟೀಸ್ ನೀಡಿದ ಹಿನ್ನೆಲೆ ಇಬ್ಬರೂ ಶಾಂತಿನಗರದಲ್ಲಿರುವ ಐಎಸ್‍ಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ವಿಚಾರಣೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಗೀತಾ ಭಟ್ ನಾನು ಯಾವುದೇ ಇಲ್ಲೀಗಲ್ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಾ. 19 ರಂದು ನನಗೆ ಐಎಸ್‍ಡಿಯಿಂದ ನನಗೆ ನೋಟೀಸ್ ಬಂದಿದೆ. ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟು ಅವರಿಗೆÀ ಸಹಕಾರ ನೀಡುತ್ತೇನೆ ಎಂದರು.

ಭಾರತ-ಚೀನಾ ಮಿಲಿಟರಿ ಮಾತುಕತೆ

ಬೀಜಿಂಗ್, ಸೆ. 22: ಭಾರತದೊಂದಿಗೆ ಆರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಗಡಿ ವಿಷಯದ ಕುರಿತು ಮಾತುಕತೆ ಮತ್ತು ಚರ್ಚೆಯನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಕ್ತಾರ ವಾಂಗ್ ವೆನ್ಬಿನ್ ಹೇಳಿಕೆಯನ್ನು ಉಲ್ಲೇಖಿಸಿ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದ್ದು ಚೀನಾ ಮತ್ತು ಭಾರತ 6ನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿತ್ತು. ಈ ವೇಳೆ ಪ್ರಸ್ತುತ ಗಡಿ ಪರಿಸ್ಥಿತಿಯ ಬಗ್ಗೆ ಉಭಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಚರ್ಚೆ ಮುಂದುವರಿಯಲು ಒಪ್ಪಿಕೊಂಡಿವೆ ಎಂದು ವರದಿ ಮಾಡಿದೆ. ಸತತ 13 ಗಂಟೆಗಳ ಕಾಲ ನಡೆದ ಈ ಮಿಲಿಟರಿ ಮಾತುಕತೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಇನ್ನು ಭಾರತೀಯ ಸೇನೆಯ ಪರವಾಗಿ 14 ಕೋರ್ ಸೇನಾ ತುಕಡಿಯ ಮುಖ್ಯಸ್ಥ ಲೆ. ಜ. ಹರಿಂದರ್ ಸಿಂಗ್ ಹಾಗೂ ಲೆ. ಜ. ಪಿಜಿಕೆ ಮೆನನ್ ಸಭೆಯ ನೇತೃತ್ವ ವಹಿಸಿದ್ದಾರೆ.