ಮಡಿಕೇರಿ, ಸೆ. 22: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಸುದ್ದಿಯಾಗಿರುವ ಹಾಗೂ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್ ಜಾಲ ಹಾಗೂ ಇದರ ಚಟುವಟಿಕೆಯ ಕುರಿತು ಇದೀಗ ಕೊಡಗು ಜಿಲ್ಲೆಯಲ್ಲೂ ಚರ್ಚೆಯ ‘ಗುಂಗು’ ಆರಂಭವಾಗಿದೆ.ರಾಜ್ಯದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳು, ನಟ - ನಟಿಯರ ವಿಚಾರಣೆ, ದಿನಕ್ಕೊಂದರಂತೆ ಬೆಳಕಿಗೆ ಬರುತ್ತಿರುವ ಹೊಸ ಹೊಸ ಹೆಸರುಗಳು ಇದಕ್ಕೆ ಕಾರಣವಾಗಿವೆ.ಈ ಹಿಂದೆ ಜಿಲ್ಲೆಯಲ್ಲಿಯೂ ಒಂದಷ್ಟು ಭಾರೀ ಪಾರ್ಟಿಗಳು, ಸಂಗೀತಮಯವಾದ ಕಾರ್ಯ ಕ್ರಮಗಳು ನಡೆದಿದ್ದು, ಇವು ಭಾರೀ ಸುದ್ದಿಯಾಗಿವೆ. ಮಾತ್ರವಲ್ಲದೆ, ಒಂದೆರಡು ‘ರೇವ್’ ಪಾರ್ಟಿಗಳು ಕೂಡ ಬೆಳಕಿಗೆ ಬಂದಿದ್ದು, ಇದರ ಮೇಲೆ ಪೊಲೀಸ್ ದಾಳಿ ನಡೆದಿದೆಯಲ್ಲದೆ, ಜಿಲ್ಲೆಯಲ್ಲಿ ಇದರ ಆಯೋಜನೆ ಮಾಡಿದವರೊಂದಿಗೆ ಪರರಾಜ್ಯಗಳ ಯುವಕ - ಯುವತಿಯರೂ, ಸಂಗೀತ ಪರಿಕರಗಳು ಮತ್ತಿತರ ಪಾರ್ಟಿ ಸಾಮಗ್ರಿಗಳು ವಶವಾಗಿರುವುದು ಜನತೆಯ ಮನದಲ್ಲಿ ಇನ್ನೂ ಉಳಿದಿದೆ. ಕೊಡಗು ಸೇರಿದಂತೆ ಚಿಕ್ಕಮಗಳೂರಿನಂತಹ ಮಲೆನಾಡು ಜಿಲ್ಲೆಗಳಲ್ಲಿ ನಡೆದಿರುವ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾಗಿ, ಈ ಕುರಿತಾದ ಪೊಲೀಸ್ ತನಿಖಾ ತಂಡದ ವಿಚಾರಣೆ ಎದುರಿಸಿರುವ ಕೆಲವರು ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ವಿಚಾರಗಳು ಇದೀಗ ಜಿಲ್ಲೆಯಲ್ಲೂ ಬಿಸಿಬಿಸಿಯಾದ ಚರ್ಚೆಗಳಿಗೆ ಕಾರಣವಾಗುತ್ತಿವೆ. ಈ ಹಿಂದೆ ಜಿಲ್ಲೆಯ ಮೂಲದ ಯುವ ಉದ್ಯಮಿಗಳಿಬ್ಬರು ನಾಪೋಕ್ಲು, ಮಡಿಕೇರಿ, ಬಿಟ್ಟಂಗಾಲದಲ್ಲಿ ಅಬ್ಬರದ ಸಂಗೀತಮಯವಾಗಿ ಜರುಗಿದ್ದ ಕಾರ್ಯಕ್ರಮವೊಂದರಲ್ಲಿನ ವಿಶೇಷ ವ್ಯವಸ್ಥೆಗಳ ಅನುಭವ ಇದೀಗ ಹಲವರ ಹುಬ್ಬೇರಿಸುತ್ತಿದೆ. ಇಲ್ಲಿ ಹೊರಗಿನಿಂದ ಪಾಲ್ಗೊಂಡಿದ್ದವರು ಮಾದಕತೆಯ ಗುಂಗಿನ ಆಸಕ್ತರೇ ಎಂಬುದು ಒಂದೆಡೆಯ ಚರ್ಚೆಯಾಗಿದ್ದರೂ,

ಇಲ್ಲಿ ಯಾವುದೇ ಪೊಲೀಸ್ ಕಾರ್ಯಾಚರಣೆ ಆ ಸಂದರ್ಭದಲ್ಲಿ ನಡೆದಿಲ್ಲ

(ಮೊದಲ ಪುಟದಿಂದ) ಎಂಬುದೂ ಕೂಡ ಗಮನಿಸುವಂತದ್ದು.ಆದರೆ, ಹಲವು ತಿಂಗಳ ಹಿಂದೆ ನಲ್ಲೂರು ಗ್ರಾಮದಲ್ಲಿ ಹಾಗೂ ನಾಪೋಕ್ಲು ಠಾಣಾ ವ್ಯಾಪ್ತಿಯ ಕಕ್ಕಬೆ ಬಳಿಯ ಹೋಂ ಸ್ಟೇಯೊಂದರಲ್ಲಿ ನಡೆಯುತ್ತಿದ್ದ ‘ರೇವ್’ ಪಾರ್ಟಿಗಳ ಮೇಲೆ ಪೊಲೀಸ್ ರೈಡ್ ನಡೆದು ಹಲವರು ಬಂಧನಕ್ಕೊಳಗಾಗಿರುವುದು ಇಲ್ಲಿ ಸ್ಮರಣೀಯವಾಗಿದೆ.

ವಿಚಾರಣೆ ಎದುರಿಸಿದ ಕೊಡಗಿನವರು

ಪ್ರಸ್ತುತ ಸ್ಯಾಂಡಲ್‍ವುಡ್‍ನಲ್ಲಿ ಸಂಚಲನ ಸೃಷ್ಟಿಸಿರುವ ಮಾದಕ ವಸ್ತು ಜಾಲ ಪ್ರಕರಣದಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ ಆಂತರಿಕ ಭದ್ರತಾದಳ (ಐಎಸ್‍ಡಿ) ಕೂಡ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಜಿಲ್ಲೆಯ ಮೂಲದವರಾದ ಮಾಜಿ ಕ್ರಿಕೆಟಿಗ ಹಾಗೂ ಬಿಗ್‍ಬಾಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಎನ್.ಸಿ. ಅಯ್ಯಪ್ಪ ಹಾಗೂ ನಟಿ ರಶ್ಮಿತಾ ಚಂಗಪ್ಪ ಕೂಡ ನಿನ್ನೆ ವಿಚಾರಣೆ ಎದುರಿಸಿದ್ದಾರೆ. ಇವರೊಂದಿಗೆ ಲೂಸ್‍ಮಾದ ಖ್ಯಾತಿಯ ನಟ ಯೋಗೇಶ್ ಕೂಡ ವಿಚಾರಣೆ ಎದುರಿಸಿದ್ದಾರೆ. ಇವರಿಬ್ಬರು ‘ಡ್ರಗ್ಸ್’ ಜಾಲದ ಕುರಿತು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಕಿರುತೆರೆ ನಟಿ ರಶ್ಮಿತಾ ಚಂಗಪ್ಪ ಕೂಡ ನಿನ್ನೆ ವಿಚಾರಣೆ ಎದುರಿಸಿದ್ದರೂ ಈ ಬಗ್ಗೆ ಪ್ರತಿಕ್ರಿಯಿಸಿ ತಮಗೆ ಸಂಬಂಧವಿಲ್ಲ. ಕೇವಲ ವಿಚಾರಣೆಗೆಂದು ಕರೆದಿದ್ದು, ಹಾಜರಾಗಿರುವುದಾಗಿ ಹೇಳಿದ್ದಾರೆ. ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಇತರ ಪ್ರವಾಸಿಕೇಂದ್ರಗಳಲ್ಲಿಯೂ ಹಲವಾರು ಪಾರ್ಟಿಗಳು ಆಯೋಜಿತವಾಗುತ್ತಿದ್ದು, ಇದರಲ್ಲಿ ಸಿನಿಮಾ ತಾರೆಯರು, ರಾಜಕಾರಣಿಗಳ ಪುತ್ರರು, ಕಿರುತೆರೆ ಕಲಾವಿದರು ಭಾಗಿಯಾಗುತ್ತಿದ್ದರು. ಈ ಪಾರ್ಟಿಗಳಲ್ಲಿ ತಾವು ಭಾಗವಹಿಸಿದ್ದನ್ನು ಲೂಸ್‍ಮಾದ ಯೋಗೇಶ್ ಹಾಗೂ ಅಯ್ಯಪ್ಪ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ. ಪ್ರವಾಸಿ ತಾಣಗಳಲ್ಲಿ ‘ನಶೆ’ಯ ಮಂದಿ ಹೊರಗಿನಿಂದ ಇಲ್ಲಿಗೆ ಬಂದು ಪಾಲ್ಗೊಂಡಿದ್ದರೇ ಎಂಬ ಕೌತುಕ ಇದೀಗ ಸೃಷ್ಟಿಯಾಗಿದೆ.