ದಿನಾಂಕ 19-06-2020ರಂದು ‘ಶಕ್ತಿ’ ಪತ್ರಿಕೆಯಲ್ಲಿ ಪುತ್ತೂರು ಅನಂತರಾಜ ಗೌಡ ಎಂಬವರು ಪ್ರಕಟಿಸಿದ ‘ಇತ್ತೀಚೆಗೆ ದೊರೆತ ಶಾಸನದ ಮಹತ್ವ' ಎಂಬ ಲೇಖನದ ಸತ್ಯಾಸತ್ಯತೆ ಅನ್ನು ಬಯಲಿಗೆಳೆಯಲು ನಾವು "ಶಕ್ತಿ" ಪತ್ರಿಕೆಯಲ್ಲಿ ದಿನಾಂಕ 14-07-2020ರಂದು "ಬದಣೆಗುಪ್ಪೆಯ ಶಾಸನ ಕೊಡಗಿಗೆ ಹೇಗೆ ಮಹತ್ವದ್ದಾಗುತ್ತದೆ?" ಎಂಬ ಲೇಖನ ಪ್ರಕಟಿಸಿ ಅನಂತ ರಾಜರ ತಪ್ಪು ಮಾಹಿತಿ ಬಗ್ಗೆ ಓದುಗರ ಗಮನಕ್ಕೆ ಬಂದಿರುವ ಸಂಗತಿ. ನಾವು ಅನಂತರಾಜರಿಂದ ಪತ್ರಿಕೆಯಲ್ಲಿ ಉತ್ತರವನ್ನು ನಿರೀಕ್ಷಿಸಿದ್ದೆವು. ಸಮರ್ಥವಾದ ಮಂಡನೆಗಳಿಂದ ಅದಕ್ಕೆ ಉತ್ತರವನ್ನು ನೀಡುತ್ತಾರೆ ಎಂದು ನಾವು ಎದುರು ನೋಡುತ್ತಿದ್ದೆವು. ಆದರೆ ಅನಂತ ರಾಜರು ನಮ್ಮ ಲೇಖನಕ್ಕೆ ಪ್ರತ್ಯುತ್ತರ ನೀಡುವ ಬದಲು 15-07-2020ರಂದು ವ್ಯಾಟ್ಸಪ್ನಲ್ಲಿ ತಮ್ಮ ಆಪ್ತರ ಜೊತೆಗೆ ನಾಲ್ಕು ಅಂಶಗಳನ್ನು ಇಟ್ಟುಕೊಂಡು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬಹಳ ಕಷ್ಟ ಪಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಅನಂತ ರಾಜರಿಗೆ ತಮ್ಮ ಅಧ್ಯಯನದ ಬಗ್ಗೆ ಸಂದೇಹಗಳಿದ್ದರೆ ಪತ್ರಿಕೆಗಳಲ್ಲಿ ಇಂಥದ್ದನ್ನು ಬರೆಯಲು ಹೋಗಬಾರದಿತ್ತು. ಆದರೆ, ಅನಂತರಾಜರು ಸಾಕ್ಷ್ಯಗಳಿಗಿಂತ ಹೆಚ್ಚಾಗಿ ಊಹೆಗಳು ಮತ್ತು ಅನಿಸಿಕೆಗಳನ್ನು ಆಧರಿಸಿ ಇತಿಹಾಸವನ್ನು ಸೃಷ್ಟಿಸಲು ಹೋಗಿದ್ದಾರೆ.

ಪೌರಾಣಿಕ ಕಥೆಗಳು, ಪುರಾಣಗಳು, ಸ್ಥಳೀಯ ಜಾನಪದ ಹೇಳುವ ಇತಿಹಾಸವನ್ನು ನಂಬುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ ಆದರೆ ಶಾಸನಗಳು, ಪುರಾತತ್ವ ಆಕಾರಗಳು, ಕಡತಗಳು ಮತ್ತು ಗ್ರಂಥಗಳು ಇತಿಹಾಸವನ್ನು ವೈಜ್ಞಾನಿಕ ರೀತಿಯಲ್ಲಿ ಸಾಬೀತು ಪಡಿಸುತ್ತದೆ. ಇನ್ನು ಪುತ್ತೂರು ಅನಂತರಾಜ ಗೌಡ ಅವರು ಒಬ್ಬ ಎಂಜಿನಿಯರ್ ಆಗಿದ್ದು ಇತಿಹಾಸವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ, ಶಾಸನಗಳ ಅಥವಾ ಪುರಾತತ್ವ ಅಧಾರದ ಮೇಲೆ ಸಾಭೀತುಪಡಿಸುವ ಬದಲು ಕೆಲವು ಊಹಾಪೆÇೀಹಗಳಿಂದ ಕೂಡಿದ ಹೊಸ ಸಿದ್ಧಾಂತವನ್ನು ಸಮಾಜದಲ್ಲಿ ತೇಲಿಬಿಡುವುದು ಸಮಂಜಸ ವಲ್ಲ. ನಾವು ಪುತ್ತೂರು ಅನಂತರಾಜ ಗೌಡ ಅವರು ತಮ್ಮ ಲೇಖನವನ್ನು ಸಮರ್ಥಿಸಿಕೊಳ್ಳಲು ನೀಡಿದ ನಾಲ್ಕು ಅಂಶಗಳಿಗೆ ನೀಡುತ್ತಿರುವ ಉತ್ತರ ಈ ಕೆಳಕಂಡಂತೆ ಇದೆ:-

(1) ನೀವು ಹೇಳಿದ ಹಾಗೆ ನಾವುಗಳು 'ಗೌಡ' ಪದ ಉಪಯೋಗಿಸಿದ್ದಕ್ಕೆ ನಮ್ಮ ಅಸಹನೆಯನ್ನು ಎಲ್ಲೂ ಪ್ರಕಟಿಸಿಲ್ಲ, ಆದರೆ ಮಡಿಕೇರಿಯ ತಾಮ್ರ ಶಾಸನದಲ್ಲಿ 'ಗೌಡ' ಪದದ ಬಳಕೆ ಇಲ್ಲದಿದ್ದರೂ ಅದನ್ನು ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸಿ ಜನರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದೇಕೆ? ಇನ್ನು ನೀವು 'ಗೌಡ' ಪದವನ್ನು ವೃತ್ತಿಸೂಚಕವಾಗಿ ನೀಡಿದ್ದು ಹೊರತು ಜಾತಿ ಸೂಚಕವಾಗಿ ಅಲ್ಲ ಎಂಬ ಸ್ಪಷ್ಟನೆಯನ್ನು ನಾವುಗಳು ಸಮರ್ಥಿಸುತ್ತೇವೆ. ಆದರೆ ಈ ಮಾಹಿತಿಯನ್ನು ನಿಮ್ಮ 19-06-2020ರ ಲೇಖನದಲ್ಲಿ ಹೇಳದೆ ಏಕೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿರಿ ? ಇದೇ ಲೇಖನದಲ್ಲಿ ನೀವು "ಗಂಗರ ಆಡಳಿತ ವ್ಯವಸ್ಥೆಯ ಕಾಲದಲ್ಲಿ ರೂಪಿಸಿದ ಅಧಿಕಾರ ವರ್ಗ ಸೀಮೆಗೌಡ, ನಾಡಗೌಡ, ಮಾಗಣೆಗೌಡ, ಊರಗೌಡ, ಒತ್ತುಗೌಡ ಎಂಬುದು ವಿಜಯನಗರ ಶಾಸನಗಳಲ್ಲಿ ದಾಖಲಿಸಿದ ಸಂಗತಿಗಳು. "ತಲಕಾಡು ಗಂಗರು ತಮ್ಮ ಪರಿವಾರದವರನ್ನು /ಪ್ರಜೆಗಳಲ್ಲಿ ಪ್ರತಿಷ್ಠಿತರನ್ನು ಗೌಡರನ್ನಾಗಿ ನೇಮಿಸಿ ರಾಜ್ಯದ ಬೊಕ್ಕಸಕ್ಕೆ ಕಪ್ಪ ಕಾಣಿಕೆಗಳನ್ನು ಕ್ರೋಢೀಕರಿಸಲು ನೇಮಿಸಿದ್ದರು. "ತಂಟೆ ತಕರಾರುಗಳನ್ನು ಪರಿಹರಿಸುವ ಜುಡಿಷಿಯಲ್ ಅಧಿಕಾರ ಅವರಿಗಿತ್ತು. ಶಾಂತಿ ಸಮಯದಲ್ಲಿ ಕೃಷಿಯಲ್ಲಿಯೂ ಯುದ್ಧ ಸಂದರ್ಭದಲ್ಲಿ ಸೈನ್ಯವನ್ನು ರೂಪಿಸುವ ಜವಾಬ್ದಾರಿ ಇವರಿಗೆ ಇತ್ತು" ಎಂದು ಬರೆದಿದ್ದು ಇದು ಕೂಡ ನಿಮ್ಮ ತಪ್ಪು ಗ್ರಹಿಕೆಯನ್ನು ಜನರ ಮೇಲೆ ಹೊರಿಸಲು ಮಾಡಿರುವ ಪ್ರಯತ್ನವಷ್ಟೆ. ಗಂಗರು ತಮ್ಮ ಪರಿವಾರದವರನ್ನು ಈ ಮೇಲ್ಕಂಡ 'ಗೌಡ' ಸೂಚಕ ಹುದ್ದೆಗಳಿಗೆ ನೇಮಿಸಿದರು ಎಂದು ಯಾವ ಶಾಸನದಲ್ಲಿ ಬರೆದಿದ್ದಾರೆ ಎಂದು ಪುತ್ತೂರು ಅನಂತರಾಜ ಗೌಡ ಸ್ಪಷ್ಟನೆ ನೀಡಬೇಕು ಅಥವಾ ಇದು ಸಹಾ ನಿಮ್ಮ ಊಹಾಪೆÇೀಹಗಳ ಸಿದ್ಧಾಂತವೆ? ಪ್ರಸಿದ್ಧ ಇತಿಹಾಸಕಾರ 'ಫೆರಿಷ್ಟ' (ಈeಡಿishಣಚಿ) ವಿಜಯನಗರ ಕಾಲದಲ್ಲಿ ಕೊಡಗಿನ ಹಿರಿಯರನ್ನೊಳಗೊಂಡ ಮಂಡಳಿಯು (ಕೊಡವ ತಕ್ಕ) ವಿಜಯನಗರದ ಪ್ರಾಬಲ್ಯವನ್ನು ಗುರುತಿಸಿ ಅದರ ಪರವಾಗಿ ಕೊಡಗಿನ ಮೇಲೆ ಆಡಳಿತ ನಡೆಸಿತು ಎಂದು ಉಲ್ಲೇಖಿಸಿದ್ದಾನೆ. ಆದರೆ ಇದನ್ನು ಪುತ್ತೂರು ಅನಂತರಾಜ ಗೌಡ ಅವರು ಯಾಕೆ ಪ್ರಸ್ತಾಪ ಮಾಡಲಿಲ್ಲ ? ಇದು ಕೊಡಗಿಗೆ ಸಂಬಂದಿಸಿದಂತೆ ಮಹತ್ವದಲ್ಲವೋ ? ಗಂಗರ ಆಳ್ವಿಕೆಯಲ್ಲಿ ಆಡಳಿತ ನಡೆಸಲು ಹಲವಾರು ಅಧಿಕಾರಿಗಳನ್ನು ನೇಮಕ ಮಾಡಿದರು, ಅದರಲ್ಲಿ ಸರ್ವಾಧಿಕಾರಿ, ಶ್ರೀಭಂಡಾರಿ, ಸಂಧಿವಿರ್ಗಹಿ, ಮಹಾಪ್ರಧಾನ, ದಂಡನಾಯಕ, ರಜ್ಜುಕ, ಲೇಖಕ ಮತ್ತು ನಿಯೋಗಿ ರಾಜ್ಯಮಟ್ಟದಲ್ಲಿ ಮಹತ್ತ್ವದ್ದೆನಿಸುವ ಕೆಲವು ಪ್ರಮುಖ ಹುದ್ದೆಗಳಾದರೆ ಅದೇ ರೀತಿ ಸ್ಥಳೀಯ ಅಥವಾ ಗ್ರಾಮ ಮಟ್ಟದಲ್ಲಿ ಇದ್ದ ಪ್ರಮುಖ ಹುದ್ದೆಗಳು ಅಂದರೆ ಪೇರ್ಗಡೆ, ನಾಡಬೋವ, ನಳಗಮಿಗ, ಪ್ರಭು, ಹೆಗ್ಗಡೆ (ಸುಂಕದ ಹೆಗ್ಗಡೆ, ಶ್ರೀಕರ್ಣ ಹೆಗ್ಗಡೆ) ಮತ್ತು ಗವುಂಡ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಗಂಗರ ಕಾಲದಲ್ಲಿ ಈ ಮೇಲ್ಕಂಡ ಹೆಸರುಗಳು ಹುದ್ದೆ ಸೂಚಕವೇ ಹೊರತು ಜಾತಿ ಅಥವಾ ಕುಲ ಸೂಚಕವಾಗಿರಲಿಲ್ಲ. ಆದರೆ ಪುತ್ತೂರು ಅನಂತರಾಜ ಗೌಡ ಅವರು ಈ ಮೇಲ್ಕಂಡ ಅಧಿಕಾರಿಗಳಲ್ಲಿ ಕೇವಲ 'ಗವುಂಡ' (ಗೌಡ)ವನ್ನು ತಮ್ಮ ಲೇಖನದಲ್ಲಿ ಬರೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

(2) ನಾವುಗಳು ಬರೆದಿರುವ ಲೇಖನದಲ್ಲಿ ಬದಣೆಗುಪ್ಪೆಯ ತಾಮ್ರ ಶಾಸನದ 'ವಿಶ್ವಾಸಾರ್ಹತೆ' ಯನ್ನು ಪ್ರಶ್ನಿಸುವ ಮೂಲಕ ಇದನ್ನು ಪ್ರಕಟಿಸಿದ ಬಿ.ಎಲ್. ರೈಸ್ ಅವರಿಗೆ ತೋರಿದ ಅಪಮಾನ ಎಂದು ಪುತ್ತೂರು ಅನಂತರಾಜ ಗೌಡ ಅವರು ನಮ್ಮ ಮೇಲೆ ಆರೋಪ ಮಾಡಿರುತ್ತಾರೆ. ಇದನ್ನು ನೋಡಿದರೆ ನಮಗೆ ಪುತ್ತೂರು ಅನಂತರಾಜ ಗೌಡ ಅವರು ಕೊಡಗಿಗೆ ಸಂಬಂಧಿಸಿದ 'ಎಪಿಗ್ರಾಫಿಯಾ ಕರ್ನಾಟಕ' ಅನ್ನು ಓದಿಯೇ ಇಲ್ಲ ಎನ್ನುವ ಅನುಮಾನ ಮೂಡುತ್ತಿದೆ! ಕನ್ನಡ ಶಾಸನ ಪಿತಾಮಹ ಬಿ.ಎಲ್.ರೈಸ್ ಒಂದು ಕಡೆ ಆದರೆ ಇನ್ನೊಂದು ಕಡೆ ಭಾರತೀಯ ಶಾಸನ ಶಾಸ್ತ್ರ ಪಿತಾಮಹ ಜೆ.ಎಫ್. ಫ್ಲೀಟ್. ಬದಣೆಗುಪ್ಪೆಯ ತಾಮ್ರ ಶಾಸನದ ವಿಶ್ವಾಸಾರ್ಹತೆಯನ್ನು ರೈಸ್ ಅವರಲ್ಲಿ ಪ್ರಶ್ನಿಸಿದ್ದು ಫ್ಲೀಟ್ ಮತ್ತು ಅಂದಿನ ಕಾಲದ ಇತರ ಇತಿಹಾಸಕಾರರೇ ಹೊರೆತು ನಾವುಗಳಲ್ಲ. ಇನ್ನಾದರೂ ಕಣ್ಣು ತೆರೆದು ಕೊಡಗಿನ 'ಎಪಿಗ್ರಾಫಿಯಾ ಕರ್ನಾಟಕ' ಅನ್ನು ಸರಿಯಾಗಿ ಓದಿದರೆ ಅದರಲ್ಲಿ ಎರಡು ಸಾಲುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಮಡಿಕೇರಿಯ ಈ ತಾಮ್ರ ಶಾಸನ ನೈಜವಲ್ಲವಾದ ಕಾರಣ ಇದರಲ್ಲಿ ಉಕ್ತವಾದ ಆಕಾಳವರ್ಷ ಪೃಥ್ವೀವಲ್ಲಭ ಅಥವಾ ಅವನ ಮಂತ್ರಿ ಮತ್ತು ದಾನದ ಇತರ ವಿವರಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕಾಗಿಲ್ಲ. (Siಟಿಛಿe ಣhe ಡಿeಛಿoಡಿಜ is ಟಿoಣ geಟಿuiಟಿe, ಟಿoಣ muಛಿh ತಿeighಣ ಟಿeeಜ ಣo be ಚಿಣಣಚಿಛಿheಜ ಣo ಣhe iಟಿಜಿoಡಿmಚಿಣioಟಿ iಣ gives ಚಿbouಣ ಂಞಚಿಟಚಿvಚಿಡಿshಚಿ Pಡಿiಣhvivಚಿಟಟಚಿbhಚಿ oಡಿ his miಟಿisಣeಡಿ ಚಿಟಿಜ oಣheಡಿ ಜeಣಚಿiಟs oಜಿ ಣhe gಡಿಚಿಟಿಣ). ಇಷ್ಟು ಸ್ಪಷ್ಟವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬರೆದರು ಸಹ ಈ ತಾಮ್ರ ಶಾಸನದ ವಿಚಾರವನ್ನು ಎತ್ತಿಕೊಂಡು ಇದು ಕೊಡಗಿಗೆ ಮಹತ್ವದ್ದಾಗಿದೆ ಎಂದು ಬಿಂಬಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವಲ್ಲವೇ ಗೌಡರೇ ?

(3) ಪುತ್ತೂರು ಅನಂತರಾಜ ಗೌಡ ಅವರ ಮೂರನೇ ಅಂಶ ನಿಜಕ್ಕೂ ವಿಚಿತ್ರವಾಗಿದೆ. ಆಗಿನ ಕಾಲದಲ್ಲಿ ಕೊಡಗಿನ ಸೀಮೆ ನಿಖರವಾಗಿ ಇರಲಿಲ್ಲ, ಹಾಗಾಗಿ ಬದಣೆಗುಪ್ಪೆ ಈಗಿನ ಕೊಡಗು ಸೀಮೆಯ ಸರಹದ್ದಿನಲ್ಲಿ ಇರುವದಾಗಿದೆ ಮತ್ತು ಅದು ಆಗಿನ ಯಾವ ಸೀಮೆಯಲ್ಲಿ ಇತ್ತೆಂದು ಊಹೆಗೆ ಬಿಟ್ಟ ವಿಚಾರ ಎಂದು ಹೇಳಿರುವ ಪುತ್ತೂರು ಅನಂತರಾಜ ಗೌಡ ಕೊಡಗಿನ ಇತಿಹಾಸವನ್ನು ಊಹಾಪೆÇೀಹಗಳಿಂದ ಸಾಬೀತು ಪಡಿಸಲು ಹೊರಟಿರುವುದು ನಿಜಕ್ಕೂ ನಮ್ಮ ದುರ್ದೈವ. ಡಿ.ಎನ್. ಕೃಷ್ಣಯ್ಯ ಅವರ ‘ಕೊಡಗಿನ ಇತಿಹಾಸ' ಗ್ರಂಥದಲ್ಲಿ ಈ ಶಾಸನದ ಬಗ್ಗೆ ದಾಖಲಿಸಿರುವುದೇ ನೆಂದರೆ ಈ ಶಾಸನದಲ್ಲಿ ದಾನ ಕೊಟ್ಟಿರುವ ಗ್ರಾಮವು ಕೊಡಗಿನ ಹತ್ತಿರದ ಸೀಮೆಯಲ್ಲಿ (ಕೊಡಗಿನಲ್ಲಿ ಅಲ್ಲ) ಇದೆ. ಬಿ.ಎಲ್. ರೈಸ್ ಅವರಿಗೆ ಬದಣೆಗುಪ್ಪೆಯ ತಾಮ್ರ ಶಾಸನ ಮಡಿಕೇರಿಯ ಖಜಾನೆಗೆ ಹೇಗೆ ಸೇರಿತ್ತು ಎಂದು ಗೊತ್ತಿಲ್ಲದಿರುವಾಗ ಪುತ್ತೂರು ಅನಂತರಾಜ ಗೌಡ ಅವರು ಕೆಲವು ಚರಿತ್ರೆಕಾರರ ಅಭಿಪ್ರಾಯವನ್ನು ಮುಂದಿಟ್ಟಕೊಂಡು ಸದರಿ ತಾಮ್ರ ಶಾಸನವನ್ನು ಕೊಡಗಿನ ಹಾಲೇರಿ ರಾಜರು ತಮ್ಮ ತಿಜೋರಿಯಲ್ಲಿ ಭದ್ರವಾಗಿಟ್ಟಿರುವ ಕಾರಣ ಹಾಲೇರಿ ರಾಜವಂಶಕ್ಕೂ ತಲಕಾಡು ಗಂಗರಿಗೂ ವಂಶಾವಳಿಯ ಸಂಬಂಧ ಇರಬಹುದು ಎಂದು ಹೇಳುವುದು ಮತ್ತೊಂದು ಊಹಾಪೆÇೀಹಗಳ ಸರದಿ. 1799ರಲ್ಲಿ ಟಿಪ್ಪು ಮರಣದ ನಂತರ ಬ್ರಿಟೀಷರು ಅವನ ಅರಮನೆಯಲ್ಲಿ ಇದ್ದ ಎಲ್ಲಾ ಒಡವೆಗಳು, ವಸ್ತುಗಳು, ಆಯುಧಗಳು, ಅಂತಃಪುರದಲ್ಲಿ ಇದ್ದ ಹೆಣ್ಣುಮಕ್ಕಳು ಹೀಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ಕಲೆಹಾಕಿ ದಾಖಲಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೇ ಮಾದರಿಯಲ್ಲಿ 1834ರಲ್ಲೂ ಸಹ ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಪದಚ್ಯುತಿಯ ನಂತರದಲ್ಲಿ ಅವರು ತಮ್ಮ ಅರಮನೆಯಿಂದ ನಿರ್ಗಮಿಸಿದ ನಂತರದಲ್ಲಿ ಬ್ರಿಟೀಷರು ಆ ಅರಮನೆಯಲ್ಲಿ ಇದ್ದ ಎಲ್ಲ ವಸ್ತುಗಳನ್ನು ದಾಖಲಿಸಿದ್ದಾರೆ. ಇಂದು ಈ ದಾಖಲೆಗಳು ಬ್ರಿಟೀಷರ ಆರ್ಕೈವ್ಸ್ (ಚಿಡಿಛಿhives)ನಲ್ಲಿ ಇದ್ದು, ಇದರಲ್ಲಿ ಬದಣೆಗುಪ್ಪೆಯ ತಾಮ್ರ ಶಾಸನದ ಉಲ್ಲೇಖ ಇದೆಯೇ ಎಂದು ಪುತ್ತೂರು ಅನಂತರಾಜ ಗೌಡ ಅವರು ಸ್ಪಷ್ಟಪಡಿಸಬೇಕು. ಕೊಡಗಿನಲ್ಲಿ ಸಿಕ್ಕಿರುವ ಹಾಲೇರಿ ರಾಜರ ಶಾಸನಗಳಲ್ಲಿ ಈ ರಾಜರು ತಮ್ಮನ್ನು ತಾವು ಚಂದ್ರವಂಶ, ಭಾರದ್ವಾಜ ಗೋತ್ರ, ಆಶ್ವಲಾಯನ ಸೂತ್ರ, ಋಕ್ ಶಾಖೆಗೆ ಸೇರಿದವರೆಂದೂ, ವೀರಶೈವ ಮತಾನುಯಾಯಿಗಳೆಂದೂ ಹೇಳಿಕೊಳ್ಳುವಾಗ ಪುತ್ತೂರು ಅನಂತರಾಜ ಗೌಡರು ಇವೆಲ್ಲವನ್ನೂ ನಿರ್ಲಕ್ಷಿಸಿ ಹಾಲೇರಿ ರಾಜರಿಗೂ ಗಂಗರಿಗೂ ವಂಶಾವಳಿ ಸಂಬಂಧವನ್ನು ಕಟ್ಟಲು ಪ್ರಯಾಸ ಪಡುತ್ತಿರುವುದು ಯಾಕೆ? ಇದರ ಹಿಂದೆ ಇರುವ ಇವರ ಲೆಕ್ಕಾಚಾರ ಏನು ?

(4) ಪ್ರಸಿದ್ಧ ಚರಿತ್ರೆಕಾರ ಶೇಖ್ ಅಲಿ ಅವರ ಬರವಣಿಗೆಯನ್ನು ಮುಂದಿಟ್ಟಕೊಂಡು, ಗಂಗರು-ಗಂಗವಾಡಿ 96000-ಗಂಗಟಿಕಾರ ಈ ಸಂಬಂಧವನ್ನು ಹೇಳುತ್ತಿರುವುದು ಇವರ ಮೂಲ ಉದ್ದೇಶ ಏನು ಎಂದು ತೋರಿಸಿಕೊಡುತ್ತದೆ. ಇನ್ನೂ ಶೇಖ್ ಅಲಿ ಅವರ ಈ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಹೆಚ್ಚಿನಂಶ musಣ hಚಿve beeಟಿ, mಚಿಥಿ hಚಿve beeಟಿ , mighಣ be (ಇರಬೇಕು, ಇರಬಹುದು, ಆಗಿರಬಹುದು) ಎನ್ನುವ ಪದಗಳು ಸಿಗುತ್ತವೆ, ಅಂದರೆ ಇದರ ಅರ್ಥ ಇದು ಸಹ ಒಂದು ಊಹಾಪೆÇೀಹಗಳ ಸರಪಳಿಯ ಕಥೆ.

ಕೊಡಗಿನ ಒಬ್ಬ ಚರಿತ್ರೆಕಾರರು ಬಹಳ ಹಿಂದೆಯೇ ಹಾಲೇರಿ ಮೊದಲ ಅರಸ ವೀರ ಒಡೆಯ ಚಂಗಾಳ್ವ ಸಂತತಿಗೆ ಸೇರಿರಬಹುದೆಂದು ಊಹಿಸಿ ಕೊಂಡು ಒಂದು ದೊಡ್ಡ ಕಥೆಯನ್ನು ಸೃಷ್ಟಿಸಿ, ಒಂದು ಶಾಖೆ ತಮ್ಮ ಭವಿಷ್ಯವನ್ನರಿಸಿ ಕೆಳದಿ ಹಳ್ಳಿಬಯಲಿನತ್ತ ಸಾಗಿದರೆನಿಸುತ್ತದೆ ಎಂದು ಹೇಳುವ ಮುಖಾಂತರ ಮಕ್ಕಳಿಗೆ ಮಲಗುವಾಗ ಹೇಳುವ ಚಂದಮಾಮ-ಬಾಲ ಮಂಗಳದ ಕಥೆಯನ್ನೆ ಸೃಷ್ಟಿಸಿದ್ದರು. ಇಂಥವರು ಬರೆದಿರುವ ಗ್ರಂಥಗಳನ್ನು ಮುಂದಿಟ್ಟುಕೊಂಡು ಪುತ್ತೂರು ಅನಂತರಾಜ ಗೌಡ ಅವರು ಇನ್ನೊಂದು ಹೊಸ ಸಿದ್ಧಾಂತಗಳನ್ನು ಸೃಷ್ಟಿಸಿ ಒಂದು ಹೊಸ ಅಧ್ಯಾಯ ಬರೆಯಲು ಹೊರಟ್ಟಿದ್ದಾರೆಂದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಕೆಳದಿ ಅರಸು ಮನೆತನದ ಮೂಲ ಪುರುಷ ದೇವಗೊಂಡ ಗೋಪಗಾವುಂಡ, ಬಸವನಗೌಡ ಇವನ ಮಕ್ಕಳಾದ ಚಿವುಡಗೊಂಡ (ಚೌಡಗೌಡ) ಮತ್ತು ಭದ್ರಗೊಂಡ (ಭದ್ರಗೌಡ) ಎಂಬುವರು ವೀರಶೈವರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಳದಿ ಸಂಸ್ಥಾನಕ್ಕೆ ಸಂಬಂಧಿಸಿದ ಶಾಸನಗಳು, ಸಾಹಿತ್ಯ ಕೃತಿಗಳು, ಕಡತಗಳು ಮತ್ತು ಪ್ರವಾಸಿ ವರದಿಗಳೂ ಸಹಾ ಇದನ್ನು ಸಮರ್ಥಿಸುತ್ತವೆ. ಇನ್ನೂ ಕೆಳದಿಯ ಅರಸ ಬಸವರಾಜ ನಾಯಕರು ಸಂಕಲಿಸಿದ 'ಶ್ರೀ ಶಿವತತ್ತ್ವರತ್ನಾಕರ' ಎಂಬ ಗ್ರಂಥದ ಐದನೆಯ ಕಲ್ಲೋಲದಲ್ಲಿ ಬರುವ ಎರಡನೆಯ ತರಂಗದಲ್ಲಿ ಮಲ್ಲದೇಶದ ಕೆಳದಿ ರಾಜವಂಶದ ವೃತ್ತಾಂತ ಮತ್ತು ಮೂಲ ಪುರುಷರ ಮಾಹಿತಿಯನ್ನು ವಿಸ್ತಾರವಾಗಿ ನೀಡಲಾಗಿದೆ. ಹಾಲೇರಿ ಹಾಗೂ ಕೆಳದಿ ಅರಸರು ತಮ್ಮ ಮೂಲ ಮತ್ತು ಧರ್ಮದ ಬಗ್ಗೆ ಶಾಸನಗಳು ಮತ್ತು ಸಾಹಿತ್ಯ ಕೃತಿಗಳ ಮೂಲಕ ಮಾಹಿತಿ ನೀಡಿದರು ಸಹ ಕೆಲವು ಚರಿತ್ರೆಯ ಇತಿಹಾಸಕಾರರು ಇವರನ್ನು ಚಂಗಾಳ್ವ ಸಂತತಿಗೆ ಸೇರಿಸಿ ತದನಂತರ ಗಂಗರಿಗೆ ಸೇರಿಸಲು ಹುನ್ನಾರ ನಡೆಸುತ್ತಿರುವುದು ಆಘಾತಕಾರಿ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಪುತ್ತೂರು ಅನಂತರಾಜ ಗೌಡ ಅವರ ಬರವಣಿಗೆಯನ್ನು ಗಮನಿಸಿದರೆ ಅವರು ಕೆಳದಿ ರಾಜಮನೆತನದ ಮೂಲ ಪುರುಷ ಒಬ್ಬ ಗೌಡ ಹಾಗಾಗಿ ಅವರು ಸಹ ಒಕ್ಕಲಿಗ ಜನಾಂಗದವನು ಮತ್ತು ಇವರಿಗೂ ಹಾಲೇರಿ ರಾಜರಿಗೂ ಸಂಬಂಧ ಇರುವುದನ್ನು ಮುಂದಿಟ್ಟಕೊಂಡು ಮುಂದಿನ ದಿನಗಳಲ್ಲಿ ಇವರು ಏನನ್ನು ಸಾಧಿಸಲು ಹೊರಟಿರುವರು ಎಂದು ನಾವುಗಳು ಗ್ರಹಿಸಬಹುದು.

ಅನಂತರಾಜರಿಗೆ ಕಡೆಯದಾಗಿ ನಾವು ಇಷ್ಟನ್ನು ಹೇಳುತ್ತೇವೆ. ನಿಮ್ಮ ಬರಹ ಸಮರಸ ಸಮಾಜವನ್ನು ನಿರ್ಮಾಣ ಮಾಡಬೇಕೇ ಹೊರತು ಕಂದಕವನ್ನು ತೋಡಬಾರದು. ನಿಮ್ಮ ಬರಹದಲ್ಲಿ ನೈಜತೆಯಿಲ್ಲದಿದ್ದರೂ ಕೂಡಾ ಸುಳ್ಳನ್ನೇ ನಂಬುವ ಅಮಾಯಕರು ಸಮಾಜದಲ್ಲಿರುತ್ತಾರೆ. ಆ ಅಮಾಯಕ, ಮುಗ್ಧರಿಗೆ ನೀವು ಅಮೃತವನ್ನು ಉಣಿಸಿರಿ, ವಿಷವನ್ನಲ್ಲ. ನಾಳೆ ನೀವು ಐತಿಹಾಸಿಕ ಸತ್ಯವೊಂದನ್ನು ಸಂಶೋಧಿಸುವಿರಿ ಎಂದು ಕೊಳ್ಳೋಣ. ಆಗ ಜನ ನಿಮ್ಮನ್ನು ನಂಬುತ್ತಾರಾ ? ನೀವು ಹೊಗಳುವ ವ್ಯಕ್ತಿಯನ್ನೂ ಜನ ಸಂದೇಹದಿಂದ ಕಾಣಲಾರಂಭಿಸುತ್ತಾರೆ. ನಿಮಗೆ ಯಾವ ಉದ್ದೇಶವಿದೆಯೋ ನಮಗೆ ಗೊತ್ತಿಲ್ಲ. ಆದರೆ ಒಂದನ್ನಂತೂ ನೆನಪಿನಲ್ಲಿಟ್ಟುಕೊಳ್ಳಿ, ಬೇಕಾದರೆ ಇತಿಹಾಸದ ಮೇಲ್ಪದರವನ್ನೇ ನೋಡಿ ತಿಳಿದುಕೊಳ್ಳಿ. ಒಂದು ನೆಲಕ್ಕೆ ಅದರದ್ದೇ ಆದ ಗುಣವಿರುತ್ತದೆ. ಅದನ್ನು ಅಸ್ಮಿತೆ ಎನ್ನಿ, ಮೂಲ ಗುಣ ಎನ್ನಿ, ಸತ್ವ ಎನ್ನಿ ಅಥವಾ ಬೇರೆ ಏನಾದರೂ ಹೆಸರನ್ನು ಕೊಟ್ಟುಕೊಳ್ಳಿ. ನಮ್ಮ ಕೆಳದಿಯನ್ನು ಅಂದು ರೂಪಿಸಿದ್ದು, ಇಂದಿಗೂ ಅದರ ಸತ್ವದ ಆಧಾರದಲ್ಲಿ ಅಲ್ಲಿನ ಸಮಾಜ ರೂಪುಗೊಂಡಿರುವುದನ್ನು ನೀವು ತಿಳಿಯಬಹುದು. ನೀವು ಮಾಗಡಿಗೆ ಹೋದರೆ ಕೆಂಪೇಗೌಡರ ಖದರಿನ ಫ್ರಾಗ್ನೆನ್ಸ್ ಹೇಗೆ ಸಿಗುತ್ತದೋ, ಸುಳ್ಯಕ್ಕೆ ಹೋದರೆ ನಿಮಗೆ ಕಾಣುವ ಅರೆಭಾಷೆಯ ಸುಗಂಧ ಹೇಗೆ ಸೂಸುತ್ತದೋ ಹಾಗೆ ಕೊಡಗಿನಲ್ಲಿ ನಿಮಗೆ ವೀರ ಪರಂಪರೆಯ, ದೊಡ್ಡ ಮನಸ್ಸಿನ ಕೊಡವರ ಫ್ರಾಗ್ನೆನ್ಸ್ ರಾಚುತ್ತದೆ. ಅದನ್ನು ನೀವು ಇಲ್ಲ ಎಂದರೂ ಅನುಭವಿಸಲೇಬೇಕು. ಏಕೆಂದರೆ ಇತಿಹಾಸದ ಮೂಲತತ್ವವೇ ಅದನ್ನು ಹೇಳುತ್ತದೆ.

-ಅಜಯ್ ಕುಮಾರ್ ಶರ್ಮಾ,

ಸದಸ್ಯರು-ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು

ಖಜಾಂಚಿ, ಭಾರತೀಯ ಇತಿಹಾಸ ಸಂಕಲನ ಸಮಿತಿ, ಶಿವಮೊಗ್ಗ

ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ,

ಅಧ್ಯಕ್ಷರು-ಕೊಡವ ಸಮಾಜ ಪೆÇನ್ನಂಪೇಟೆ