ಮಡಿಕೇರಿ, ಸೆ. 21: ಎತ್ತ ನೋಡಿದರತ್ತ ಗುಂಡಿ ಬಿದ್ದು ನಡೆದಾಡಲೂ ಕೂಡ ಸಾಧ್ಯವಾಗದ ಗುಂಡಿಬಿದ್ದ ರಸ್ತೆಗಳು; ಸಮರ್ಪಕ ಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿಯುವ ನೀರು.., ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಮುಳುಗಿರುವ ಪ್ರದೇಶಗಳು; ನಿರ್ವಹಣೆಯಿಲ್ಲದ ಉದ್ಯಾನಗಳು; ಒತ್ತುವರಿಯಾಗಿರುವ ಕೆರೆ-ಉದ್ಯಾನ, ತೊರೆಗಳು, ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಪಾರ್ಕಿಂಗ್ ಸಮಸ್ಯೆ.., ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊದ್ದು ಮಂಜಿನ ಹನಿಯೊಳಗಡೆ ಮಲಗಿರುವ ಮಡಿಕೇರಿ ನಗರದ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳಿಗಿಂತ ದೊಡ್ಡದಾಗಿರುವುದು ಕಸದ ಸಮಸ್ಯೆ..! 2005 ರಿಂದಲೂ ಸಂಗ್ರಹವಾಗಿರುವ ‘ಕಸದ ಗುಡ್ಡಕ್ಕೆ’ ಇನ್ನೂ ಮುಕ್ತಿ ಸಿಕ್ಕಿಲ್ಲ. ಗುಡ್ಡದ ಕೆಳಗೆ ಅಸಹನೀಯ ಬದುಕು ನಡೆಸುತ್ತಿರುವ ನಿವಾಸಿಗಳು ಸಹನೆ ಕಳೆದುಕೊಂಡು ಸಮಸ್ಯೆಗೆ ಮುಕ್ತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಚ್ಚನ್ಯಾಯಾಲಯ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸುವಂತೆ ಮಡಿಕೇರಿ ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ-ತ್ಯಾಜ್ಯಗಳನ್ನು ನಗರದ ಎತ್ತರ ಪ್ರದೇಶದಲ್ಲಿರುವ ಸ್ಟೋನ್‍ಹಿಲ್ ಬಳಿ ಸುರಿಯಲಾಗುತ್ತಿದೆ. ಹಿಂದೆ ಚೈನ್‍ಗೇಟ್ ಬಳಿ ಕಸ ಸುರಿಯಲಾಗುತ್ತಿತ್ತು. ಅಲ್ಲಿ ಕಸ ಸುರಿಯುವುದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿದ್ದರಿಂದ ಅಂದು ಉಸ್ತುವಾರಿ ಸಚಿವರಾಗಿದ್ದ ದಿ. ಎಂ.ಎಂ. ನಾಣಯ್ಯ ಅವರು ಸ್ಟೋನ್‍ಹಿಲ್ ಬಳಿ 6 ಎಕರೆ ಪ್ರದೇಶವನ್ನು ಒದಗಿಸಿದ್ದರು. ಬರಬರುತ್ತಾ ಕಸದ ರಾಶಿ ಹೆಚ್ಚಾಗುತ್ತಲೇ ಕಸವನ್ನು ಬೇರ್ಪಡಿಸಿ, ವಿಲೇವಾರಿ ಮಾಡುವ ಘಟಕ-ಯಂತ್ರವನ್ನು ಅಳವಡಿಸಲಾಯಿತು. ಈ ಗುತ್ತಿಗೆ ಅವಧಿ 2016ಕ್ಕೆ ಮುಕ್ತಾಯಗೊಂಡಿದ್ದು, ನಂತರದಲ್ಲಿ ಕಸ ವಿಂಗಡಣೆಯಾಗದೆ ರಾಶಿ ರಾಶಿಯಾಗಿ ಬೆಳೆಯಲಾರಂಭಿಸಿ, ಕಸದ ಗುಡ್ಡವೇ ನಿರ್ಮಾಣಗೊಂಡಿತು. ನೊಣಗಳು, ಹುಳ-ಉಪ್ಪಟೆಗಳು ಉತ್ಪತ್ತಿಯಾಗಿ ಗುಡ್ಡದ ಕೆಳಗಿನ ನಿವಾಸಿಗಳಿಗೆ ತೊಂದರೆಯುಂಟಾಗಲಾರಂಭಿಸಿತು. ಈ ಬಗ್ಗೆ ಸಾಕಷ್ಟು ಮನವಿ, ಪ್ರತಿಭಟನೆಗಳು ನಡೆದರೂ, ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಲಯ ಆದೇಶ ನೀಡಿದ್ದರೂ, ನಗರಸಭೆ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕೊನೆಯ ಪ್ರಯತ್ನವಾಗಿ ಸ್ಥಳೀಯ ನಾಲ್ಕು ಬಡಾವಣೆಗಳ ನಿವಾಸಿಗಳು ಸಂಘವೊಂದನ್ನು ರಚಿಸಿಕೊಂಡು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಇಂದು ವಿಚಾರಣೆ ಕೈಗೆತ್ತಿಕೊಂಡು ಕಸ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಉಭಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ದಾಖಲೆಗೆ ಸೂಚನೆ

ಕಸದ ಸಮಸ್ಯೆಯಿಂದ ಬೇಸತ್ತ ಸ್ಟೋನ್‍ಹಿಲ್ ಕೆಳಭಾಗದಲ್ಲಿರುವ ಸುಬ್ರಹ್ಮಣ್ಯನಗರ, ರೈಫಲ್ ರೇಂಜ್, ಕನ್ನಿಕಾಬಡಾವಣೆ ಹಾಗೂ ವಿದ್ಯಾನಗರದ ನಿವಾಸಿಗಳು ‘ಎಸ್‍ಆರ್‍ವಿಕೆ’ ಹೆಸರಿನಲ್ಲಿ ಸಂಘವೊಂದನ್ನು ರಚಿಸಿ ಆ ಮೂಲಕ ರಾಜ್ಯ ಉಚ್ಚನ್ಯಾಯಾಲಯಕ್ಕೆ ಸಾರ್ವಜಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಈ ಸಂಬಂಧ ಕ್ರಮವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿತ್ತು. ಮಂಡಳಿಯು ನಗರಸಭೆ ಆಯುಕ್ತರಿಗೆ ಈ ಸಂಬಂಧ ನೋಟೀಸ್ ಜಾರಿ ಮಾಡಿತ್ತು.

ಈ ಬಗ್ಗೆ ಇಂದು ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಜಕ ಹಾಗೂ ನ್ಯಾಯಾಧೀಶ ಸಂಜಯಗೌಡ ಅವರುಗಳು ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಾದ ಜೀವನ್ ನೇರಲ್ಲಿ ಅವರಲ್ಲಿ ಮಾಹಿತಿ ಬಯಸಿದಾಗ ವಕೀಲರು ನಗರಸಭೆ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಕ್ರಮ ಜರುಗಿಸಿರುವುದಾಗಿ ಉತ್ತರಿಸಿದ್ದಾರೆ.

(ಮೊದಲ ಪುಟದಿಂದ) ಯಾವ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ, ಏನು ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ಒಂದು ವಾರದೊಳಗಡೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿರುವುದಾಗಿ ತಿಳಿದು ಬಂದಿದೆ.

ಅಲ್ಲದೆ ನಗರಸಭೆ ಅನಧಿಕೃತವಾಗಿ ಕಸ ವಿಲೇವಾರಿ ಮಾಡುತ್ತಿದ್ದು, ಕಸ ಹಾಕುವುದನ್ನು ಯಾವಾಗದಿಂದ ನಿಲ್ಲಿಸಲಾಗುವುದು? ಪರ್ಯಾಯ ಜಾಗದ ವ್ಯವಸ್ಥೆ ಮಾಡಿರುವ ಬಗ್ಗೆ ಅಫಿಡಾವಿತ್ ಸಲ್ಲಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಈ ಸಂಬಂಧ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿ ಆದೇಶಿಸಿದ್ದಾರೆ. ನಗರಸಭೆ ಪರ ವಕೀಲೆ ಕೆ. ಅನುಸೂಯದೇವಿ ಹಾಗೂ ಎಸ್‍ಆರ್‍ವಿಕೆ ಸಂಘದ ಪರವಾಗಿ ವಕೀಲೆ ಅನುಚಂಗಪ್ಪ ವಕಾಲತ್ತು ವಹಿಸಿದ್ದಾರೆ.

ಆಯುಕ್ತರಿಗೆ ನೋಟೀಸ್

ನಗರದ ಸ್ಥಳೀಯ ನಿವಾಸಿಗಳು ಎಸ್‍ಆರ್‍ವಿಕೆ ಸಂಘದ ಮೂಲಕ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಯಾವ ರೀತಿ ಕಸ ಸಮಸ್ಯೆ ಬಗೆಹರಿಸಬಹುದೆಂದು ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ನಗರಸಭಾ ಆಯುಕ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಸಂಬಂಧ ಮಂಡಳಿ ಅಧ್ಯಕ್ಷರು ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ.

ದೀರ್ಘ ಹಾಗೂ ಕಡಿಮೆ ಅವಧಿಗೆ ಯೋಜನೆ ರೂಪಿಸಿ, ಕಸ ವಿಂಗಡಣೆ ಮಾಡುವಂತೆ ನಿರ್ದೇಶನ ನೀಡಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಗಣೇಶನ್ ಮಾಹಿತಿ ನೀಡಿದ್ದಾರೆ.

ದಾಖಲೆ ಸಹಿತ ಪತ್ರ

ಪ್ರಸ್ತುತ ಇರುವ ಕಸ ವಿಲೇವಾರಿ ಜಾಗವನ್ನು ಸ್ಥಳಾಂತರಿಸುವಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟೀಸ್ ಬಂದಿದೆ. ಆದರೆ, ಸದ್ಯಕ್ಕೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪರ್ಯಾಯ ಜಾಗ ಲಭ್ಯವಿಲ್ಲ. ಜಾಗದ ಹುಡುಕಾಟ ಆಗುತ್ತಿದೆ. ಅಲ್ಲದೆ ಕಸವಿಂಗಡಣೆ ಮಾಡಲು ಹೊಸ ಯೋಜನೆ ಪೌರಾಡಳಿತ ನಿರ್ದೇಶನಾಲಯಕ್ಕೆ ದಾಖಲೆ ಸಹಿತ ಪತ್ರ ಬರೆಯಲಾಗಿದೆ ಎಂದು ನಗರಸಭೆ ಆಯುಕ್ತ ರಾಮ್‍ದಾಸ್ ತಿಳಿಸಿದ್ದಾರೆ.

2005 ರಿಂದಲೇ ಇಲ್ಲಿ ಕಸ ಸಂಗ್ರಹವಾಗುತ್ತಿದ್ದು, 2016ರ ವರೆಗೆ ವಿಂಗಡಣೆಯಾಗುತ್ತಿತ್ತು. ಕಸ ಹಾಕಲು ಅನುಮತಿ ನವೀಕರಣಕ್ಕೆ ಕೋರಿ 2017ರಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದ್ದರೂ, ಮಂಡಳಿ ಅನುಮತಿ ನೀಡಿಲ್ಲ. ಅಲ್ಲದೆ 2017ರಲ್ಲಿ ರೂ. 551 ಲಕ್ಷ ವೆಚ್ಚದ ಸಮಗ್ರ ಯೋಜನಾ ವರದಿ ತಯಾರಿಸಲಾಗಿದೆಯಾದರೂ, ಇದೀಗ ಆ ಮೊತ್ತಕ್ಕೆ ಯೋಜನೆ ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ನೂತನ ಯೋಜನೆಗೆ ಮನವಿ ಸಲ್ಲಿಸಲಾಗಿದೆ. ಕಳೆದ ತಾ. 18 ರಂದು ಪೌರಾಡಳಿತ ಸಚಿವರು, ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ರಾಮ್‍ದಾಸ್ ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವು ಬಾರಿ ಅನುಮತಿ ಕೋರಿ ಪತ್ರ ಬರೆದರೂ ಇದುವರೆಗೆ ಅನುಮತಿ ನೀಡದೆ ಇದೀಗ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಂಡಳಿ ಹಾಗೂ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಮಸ್ಯೆ ಉಲ್ಬಣ: 2005 ರಿಂದ ಸ್ಟೋನ್ ಹಿಲ್ ಬಳಿ ಕಸ ಸುರಿಯಲಾಗುತ್ತಿದ್ದು, ಸಮರ್ಪಕವಾಗಿ ವಿಂಗಡಣೆ ಹಾಗೂ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆ ಬೆಟ್ಟದಷ್ಟು ಬೆಳೆದಿದೆ. ಕಳೆದ 2013 ರಿಂದ ಸಮಸ್ಯೆ ಬಿಗಡಾಯಿಸಿದ್ದು, ನೊಣಗಳ ಹಾವಳಿಯಿಂದ ಮನೆಯೊಳಗೆ ವಾಸ ಮಾಡುವಂತಿಲ್ಲ. ರೋಗ-ರುಜಿನಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ 2016ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಸಂದರ್ಭ ನ್ಯಾಯಾಲಯ ಅಲ್ಲಿ ಕಸ ಸುರಿಯದಂತೆ, ಪರ್ಯಾಯ ಜಾಗ ಹುಡುಕುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಆದರೂ ಕ್ರಮಕೈಗೊಳ್ಳದಿರುವುದರಿಂದ ಇದೀಗ ಸ್ಥಳೀಯರು ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಮೂಲಕವಾದರೂ ಸಮಸ್ಯೆಗೆ ಪರಿಹಾರ ದೊರಕಬಹುದೆಂಬ ಆಶಾಭಾವನೆ ಸ್ಥಳೀಯರದ್ದಾಗಿದೆ. -ಸಂತೋಷ್