ಗೋಣಿಕೊಪ್ಪಲು, ಸೆ. 21: ಅಕ್ರಮವಾಗಿ ಅರಣ್ಯಕ್ಕೆ ತೆರಳಿ ಜಿಂಕೆಯೊಂದನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಇಬ್ಬರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆನೆಚೌಕೂರು ವನ್ಯಜೀವಿ ವಲಯದ ಸಿಬ್ಬಂದಿಗೆ ದೊರೆತ ಖಚಿತ ಸುಳಿವಿನ ಮೇರೆಗೆ ಭಾನುವಾರ ಸಂಜೆ ದಾಳಿ ನಡೆಸಿದಾಗ ದಕ್ಷಿಣ ಕೊಡಗಿನ ಕೆಂಬುಕೊಲ್ಲಿಯ ಆನೆ ಕಂದಕದ ಬಳಿ ಜಿಂಕೆ ಮಾಂಸವನ್ನು ತುಂಬಿಕೊಂಡು ಬರುತ್ತಿದ್ದ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇನ್ನಿಬ್ಬರು ದಾಳಿಯ ಸೂಚನೆ ಅರಿತು ಪರಾರಿಯಾಗಿದ್ದಾರೆ. ಎನ್.ಬಿ. ಮನು ಮತ್ತು ಮಂಜು ಎಂಬವರೇ ಬಂಧಿತ ಆರೋಪಿ ಗಳಾಗಿದ್ದು, ಪಿ.ಯು. ಪೂವಯ್ಯ ಮತ್ತು ರಾಜು ಪರಾರಿಯಾದ ಆರೋಪಿ ಗಳಾಗಿದ್ದಾರೆ.
ಬಂಧಿತರಿಂದ 20 ಕೆಜಿ ಜಿಂಕೆ ಮಾಂಸ, ಒಂದು ಜೋಡಿ ನಳಿಕೆಯ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಆನೆಚೌಕೂರು (ಮೊದಲ ಪುಟದಿಂದ) ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಸತೀಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಓ ವೈ.ಕೆ. ಕಿರಣ್ ಕುಮಾರ್, ಎಆರ್ಎಫ್ಓ ಸತೀಶ್, ಸಿಬ್ಬಂದಿಗಳಾದ ಯೋಗೇಶ್ವರಿ, ಶಶಿ, ಶಿವಲಿಂಗಯ್ಯ, ಬಸವರಾಜು, ಶಶಿಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.