ಮಡಿಕೇರಿ, ಸೆ. 21: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಡಿ ದೇಶವಿಂದು ಸುರಕ್ಷಿತವಾಗಿದ್ದು, ಒಂದೆಡೆ ಜಾಗತಿಕ ಕೊರೊನಾ ಹಾಗೂ ಭಯೋತ್ಪಾದನೆಯ ನಡುವೆ ಪ್ರಸ್ತುತ ಬಹಿರಂಗಗೊಳ್ಳುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ರಾಷ್ಟ್ರ ದಿಟ್ಟಕ್ರಮ ಅನುಸರಿಸುವಂತಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಬಿಜೆಪಿ ನೇತೃತ್ವದಲ್ಲಿ ಪಕ್ಷ ಸಂಘಟನೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಶಾಸಕರು ಕರೆ ನೀಡಿದರು. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಆಲೂರು-ಸಿದ್ದಾಪುರ, ಹಾನಗಲ್, ಗಣಗೂರು, ಐಗೂರು ಮುಂತಾದೆಡೆಗಳಲ್ಲಿ ಜರುಗಿದ ಕಾರ್ಯಕರ್ತರ ಸಭೆಗಳಲ್ಲಿ ಅವರು ಮಾತನಾಡಿದರು. ಆಲೂರು-ಸಿದ್ದಾಪುರದಲ್ಲಿ ಈ ಸಂದರ್ಭ ಸಾರ್ವಜನಿಕರು ಗ್ರಾಮೀಣ ಸಾರಿಗೆ ಸಮಸ್ಯೆ, ವಿದ್ಯುತ್ ಸಮಸ್ಯೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು, ಶಾಸಕರ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಈ ವೇಳೆ ಮಾತನಾಡಿ, ಮಳೆಗಾಲದ ಬಳಿಕ ಅಕ್ಟೋಬರ್‍ನಲ್ಲಿ ರಸ್ತೆ ದುರಸ್ತಿ ಕೆಲಸ ಕೈಗೊಳ್ಳುವ ಭರವಸೆ ನೀಡಿದರು.
ಶಾಸಕದ್ವಯರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಅವರುಗಳು ಮಾತನಾಡಿ, ವಿವಿಧ ಘಟಕಗಳಿಗೆ ನೇಮಕಗೊಂಡಿರುವ ಪ್ರಮುಖರು ಪಕ್ಷ ಸಂಘಟನೆಗೆ ಒತ್ತು ನೀಡುವ ಬಗ್ಗೆ ತಿಳಿ ಹೇಳಿದರು. ಪದಾಧಿಕಾರಿಗಳಾದ ಬಿ.ಬಿ. ಭಾರತೀಶ್, ಹುಲ್ಲೂರಿಕೊಪ್ಪ ಮಾದಪ್ಪ, ಮಂಜುಳಾ, ರೂಪ ಸತೀಶ್, ಗಂಗಾಧರ್, ಮಹದೇವ ಪೇಟೆ ನೇತ್ರಾವತಿ ಮೊದಲಾದವರು ವೇದಿಕೆಯಲ್ಲಿದ್ದರು.