ಪೆÇನ್ನಂಪೇಟೆ, ಸೆ. 21: ಸರ್ಕಾರ ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ 60 ಗ್ರಾಮಗಳನ್ನು ಮಾತ್ರ ನೆರೆ ಪರಿಹಾರಕ್ಕೆ ಪರಿಗಣಿಸಿದ್ದು, ವೀರಾಜಪೇಟೆ ತಾಲೂಕಿನ ಕುಂದಾ ಹಾಗೂ ಈಚೂರು ಗ್ರಾಮಗಳನ್ನು ಕೈಬಿಡಲಾಗಿದೆ ಎಂದು ಅಲ್ಲಿನ ಶ್ರೀ ದಬ್ಬೆಚ್ಚಮ್ಮ ಜನ ಸಾಮಾನ್ಯ ಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆರೋಪಿಸಿದ್ದಾರೆ. ಗೋಣಿಕೊಪ್ಪಲಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಪಟ್ಟಂಗಡ ಬೋಸ್ ಅವರು, ಕುಂದ ಹಾಗೂ ಈಚೂರು ಗ್ರಾಮದಲ್ಲಿ ನೂರಾರು ರೈತಾಪಿ ವರ್ಗ ಸಣ್ಣ ಹಿಡುವಳಿದಾರರಾಗಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆ, ಗಾಳಿಗೆ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಇತ್ಯಾದಿ ಫಸಲು ನಷ್ಟವಾಗಿದೆ. ನೆರೆ ಪರಿಹಾರಕ್ಕೆ ನಮ್ಮ ಗ್ರಾಮಗಳನ್ನು ಅಧಿಕಾರಿಗಳು ಪರಿಗಣಿಸದೇ ಇರುವದರಿಂದ ಈ ಭಾಗದ ಕೃಷಿಕರಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಕುಂದ ಹಾಗೂ ಈಚೂರು ಗ್ರಾಮದಲ್ಲಿ ಹಲವು ಸಮಸ್ಯೆಗಳನ್ನು ಕೃಷಿಕರು ಎದುರಿಸುತ್ತಿದ್ದು, ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವಂತೆ ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಪೆಮ್ಮಯ್ಯ ಉಪಸ್ಥಿತರಿದ್ದರು.