ಶನಿವಾರಸಂತೆ, ಸೆ. 21: ಪಟ್ಟಣದ ಲಯನ್ಸ್ ಸಂಸ್ಥೆ ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಇಂಜಿನಿಯರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಕನ್ನಡ ನಾಡಿನಲ್ಲಿ ಜನಿಸಿಲ್ಲದಿದ್ದರೆ ಕನ್ನಂಬಾಡಿಕಟ್ಟೆ ನಿರ್ಮಾಣವಾಗುತ್ತಿರಲಿಲ್ಲ. ಅಂದಿನ ಮೈಸೂರು ಅರಸರು ಮತ್ತು ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಮಂಡ್ಯ ಜಿಲ್ಲೆಯಾದ್ಯಂತ ರೈತಾಪಿ ವರ್ಗ ಇಂದು ಸಮೃದ್ಧಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಕೆ.ಎಂ. ಜಗನ್ ಪಾಲ್ ಹಾಗೂ ಭಾರತಿ ವಿದ್ಯಾಸಂಸ್ಥೆ ಉಪನ್ಯಾಸಕ ಸೋಮಶೇಖರ್ ದಿನದ ಮಹತ್ವದ ಬಗ್ಗೆ ಹಾಗೂ ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿ, ಅವರ ಸಾಧನೆ ಸಾಮಾನ್ಯ ಜನರ ಹಿತವನ್ನು ಕಾಪಾಡಲು ಅನುಕೂಲವಾಯಿತು ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷ ಎನ್.ಬಿ. ನಾಗಪ್ಪ, ಉಪಾಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್, ಸದಸ್ಯರಾದ ಸಿ.ಪಿ. ಹರೀಶ್, ಕೆ.ಎನ್. ಕಾರ್ಯಪ್ಪ, ಎಸ್.ಜಿ. ನರೇಶ್ಚಂದ್ರ, ಎಸ್.ಎಸ್. ಚಂದ್ರಶೇಖರ್, ಟಿ.ಆರ್. ಕೇಶವಮೂರ್ತಿ, ಜಿ.ಪಿ. ಪುಟ್ಟಪ್ಪ ಉಪಸ್ಥಿತರಿದ್ದರು.