ಕುಶಾಲನಗರ, ಸೆ. 21: ಕುಶಾಲನಗರ ಸಂತೆ ಮಾರುಕಟ್ಟೆ ಬಳಿ ಗುಡಿಸಲುಗಳಲ್ಲಿ ವಾಸವಿರುವ ನಿರ್ಗತಿಕ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಪಡಿತರ ಕಿಟ್ ವಿತರಣೆ ಮಾಡಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಗಣೇಶ್, ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲದೆ ತೀರಾ ಶೋಚನೀಯ ಸ್ಥಿತಿಯಲ್ಲಿ ಮುರುಕಲು ಗುಡಿಸಲುಗಳಲ್ಲಿ ವಾಸಿಸುತ್ತಿರುವ 8 ಕುಟುಂಬಗಳ ಬಗ್ಗೆ ಮಾಹಿತಿ ತಿಳಿದ ಅವರು ತಮ್ಮ ತಂಡದೊಂದಿಗೆ ಆಗಮಿಸಿ ಕಿಟ್ ವಿತರಣೆ ಮಾಡಲಾಗಿದೆ. ಗುಡಿಸಲು ವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಅವರು ಕೂಡಲೇ ಈ ಬಗ್ಗೆ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಜಿಲ್ಲೆಗೆ ಕನಿಷ್ಟ 10 ಸಾವಿರ ಮನೆಗಳನ್ನು ಒದಗಿಸುವಂತೆ ಕೋರಲಾಗುವುದು ಎಂದರು. ಕೊಡಗಿನ ಶಾಸಕರು ತಮ್ಮ ಮತದಾರರ ಸಮಸ್ಯೆಗಳನ್ನು ಅರಿತು ಕಷ್ಟಕ್ಕೆ ಸ್ಪಂದಿಸುವಂತಾಗಬೇಕಿದೆ ಎಂದು ಒತ್ತಾಯಿಸಿದರು.
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್, ಜೆಡಿಎಸ್ನ ರಾಜ್ಯ ಹಿರಿಯ ಮುಖಂಡ ಎಂ.ಎಂ. ಶರೀಫ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್, ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಸುನಿಲ್, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ, ಜಿಲ್ಲಾ ಮುಖಂಡ ರಘು ಮತ್ತಿತರರು ಇದ್ದರು.