ಮಡಿಕೇರಿ, ಸೆ. 21 : ಮಡಿಕೇರಿಯ ಅರಮನೆ ಆವರಣ ದಿಂದ ಇಲ್ಲಿನ ಕೈಗಾರಿಕಾ ಬಡಾವಣೆ ಯಲ್ಲಿ ರೂ. 87 ಲಕ್ಷ ವೆಚ್ಚದಲ್ಲಿ ನವೀಕೃತ ಕಟ್ಟಡದೊಳಗೆ ಆರಂಭಗೊಂಡಿರುವ ಡಿಜಿಟಲ್ ಗ್ರಂಥಾಲಯಕ್ಕೆ ಮುಖ್ಯ ಅಧಿಕಾರಿಯೇ ಇಲ್ಲ; ಬದಲಾಗಿ ಕಳೆದ 12 ವರ್ಷಗಳಿಂದ ಕಿರಿಯ ಸಹಾಯಕ ಅಧಿಕಾರಿ ಲೀಲಾವತಿ ಅವರು ಪ್ರಬಾರ ಹೊಣೆಗಾರಿಕೆ ನಿರ್ವಹಿಸಿಕೊಂಡು ಬರುತ್ತಿರುವ ಅಂಶ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಜಿಲ್ಲಾ ಗ್ರಂಥಾಲಯ ಸೇರಿದಂತೆ ಇತರ ನಾಲ್ಕು ಶಾಖೆಗಳ ಸಹಿತ ಐದು ಕಡೆಗಳಲ್ಲಿ ಉಸ್ತುವಾರಿ ನೋಡಿ ಕೊಳ್ಳಲು ಸರಕಾರ ದಿಂದ 21 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಏಳು ಜನರಿದ್ದು, ಇಬ್ಬರು ಬೇರೆ ಜಿಲ್ಲೆಗಳಿಗೆ ನಿಯೋಜನೆಗೊಂಡು ಕೇವಲ ಐವರು ಮಾತ್ರ ಕರ್ತವ್ಯ ನಿರ್ವಹಿಸುವಂತಾಗಿದೆ.ಪ್ರಸ್ತುತ ಡಿಜಿಟಲೀಕರಣ ಗೊಂಡಿರುವ ಈ ಗ್ರಂಥಾಲಯ ಕಟ್ಟಡದೊಳಗೆ ಒಂದು ಲಕ್ಷಕ್ಕೂ ಅಧಿಕ ಗ್ರಂಥಗಳು ಸೇರ್ಪಡೆಗೊಂಡಿವೆ. ಓದುಗರು ಕೂಡ ‘ಈ ಸಾರ್ವಜನಿಕ ಗ್ರಂಥಾಲಯ ಆ್ಯಪ್’ ಮೂಲಕ ನೇರವಾಗಿ ತಮ್ಮ ಮೊಬೈಲ್‍ಗಳಲ್ಲಿ ಸದಸ್ಯತ್ವದೊಂದಿಗೆ ಲಕ್ಷದಷ್ಟು ಗ್ರಂಥಗಳನ್ನು ಓದುವ ತಂತ್ರಜ್ಞಾನ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಳ್ಳಬಹುದು. ಈಗಾಗಲೇ ಕಳೆದ ಜೂನ್ 5 ರಂದು ಈ ನವೀಕೃತ ಗ್ರಂಥಾಲಯ ಉದ್ಘಾಟನೆಗೊಂಡಿದ್ದರೂ ತಾಂತ್ರಿಕ ಕೆಲವು ತೊಡಕುಗಳಿಂದ ಸಂಪೂರ್ಣ ಡಿಜಿಟಲೀಕರಣ ಅನುಷ್ಠಾನಗೊಂಡಿಲ್ಲ; ತಾ. 2 ರಿಂದ ಸರಕಾರದ ಮಾರ್ಗ ಸೂಚಿಯಂತೆ ಗ್ರಂಥಾಲಯ ಪುನರಾರಂಭ ಗೊಂಡಿದ್ದರೂ, ಕೈಬೆರಳೆಣಿಕೆಯ ಓದುಗರು ಧಾವಿಸ ತೊಡಗಿದ್ದಾರೆ. ಕೊರೊನಾ ಸೋಂಕಿನ ಆತಂಕ ನಡುವೆ ಬಹಳಷ್ಟು ಹಿರಿಯ ಓದುಗರು ಇತ್ತ ತಲೆ ಹಾಕಿದಂತೆ ಕಾಣುತ್ತಿಲ್ಲ.
ಬದಲಾಗಿ ಗ್ರಂಥಾಲಯ ಸಿಬ್ಬಂದಿ ಮಾತ್ರ ಓದುಗರಿಗಾಗಿ ದಿನಪತ್ರಿಕೆಗಳು ಸೇರಿದಂತೆ ಅಪಾರ ಜ್ಞಾನ ಭಂಡಾರವನ್ನು ಕಲ್ಪಿಸಲು, ಕೋವಿಡ್ -19 ಸೋಂಕು ವಿರುದ್ಧ ಎಲ್ಲಾ ಮುಂಜಾಗ್ರತಾ ಕ್ರಮ ದೊಂದಿಗೆ ಸಿದ್ಧತೆ ಕೈಗೊಂಡಿದ್ದಾರೆ. ಐತಿಹಾಸಿಕ ಕೋಟೆ ಆವರಣದಿಂದ ಕೈಗಾರಿಕಾ ಬಡಾವಣೆಗೆ ವರ್ಗಾವಣೆಗೊಂಡಿರುವ ಈ ಗ್ರಂಥಾಲಯದಲ್ಲಿ ದೈನಂದಿನ ಅಧ್ಯಯನಕ್ಕೆ ಇನ್ನಷ್ಟೇ ಓದುಗರು ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳಬೇಕಿದೆ.