6 ಗುಡ್ಡಗಳನ್ನು ವಶಕ್ಕೆ ಪಡೆದ ಭಾರತ

ಲಡಾಖ್, ಸೆ. 21: ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಪೆಟ್ಟು ನೀಡುತ್ತಿದೆ. ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಇದಕ್ಕೂ ಮುನ್ನ ಲಡಾಖ್‍ನ ಎಲ್‍ಎಸಿಯಾದ್ಯಂತ ಇರುವ ಪ್ರಮುಖ, ಆಯಕಟ್ಟಿನ ದೃಷ್ಟಿಯಿಂದ ಬಹುಮುಖ್ಯವೂ ಆಗಿರುವ 6 ಗುಡ್ಡಗಳನ್ನು ವಶಕ್ಕೆ ಪಡೆದಿರುವ ವರದಿಗಳು ಬಂದಿದೆ. ಈಶಾನ್ಯ ಲಡಾಖ್‍ನಲ್ಲಿ ಈ 6 ಗುಡ್ಡಗಳನ್ನು ಭಾರತ ವಶಕ್ಕೆ ಪಡೆದಿರುವುದರಿಂದ ಈಗ ಗಡಿಯಲ್ಲಿ ಚೀನಾದ ಪ್ರತಿಯೊಂದು ನಡೆಯ ಮೇಲೂ ಹದ್ದಿನ ಕಣ್ಣಿಡುವುದಕ್ಕೆ ಸಾಧ್ಯವಾಗಲಿದೆ.

ಕೋಲಾಹಲ ಎಬ್ಬಿಸಿದ ವಿರೋಧ ಪಕ್ಷಗಳು

ನವದೆಹಲಿ, ಸೆ. 21: ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಟಿಎಂಸಿ ನಾಯಕ ಡೆರೆಕ್ ಒಬ್ರಿಯೆನ್ ಮತ್ತು ಎಎಪಿಯ ಸಂಜಯ್ ಸಿಂಗ್ ಸೇರಿದಂತೆ ಎಂಟು ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಇಂದು ಕೋಲಾಹಲ ಎಬ್ಬಿಸಿದ ಕಾರಣ ರಾಜ್ಯಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಬೆಳಿಗ್ಗೆಯಿಂದ ನಾಲ್ಕು ಬಾರಿ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮೇಲ್ಮನೆ ಪುನರಾರಂಭವಾದಾಗಲೂ ವಿಪಕ್ಷಗಳ ಸದಸ್ಯರು ಕಲಾಪದಲ್ಲಿ ಕೋಲಾಹಲ ಎಬ್ಬಿಸಿದರು. ಆಗ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಸಂಸದರಾದ ಭುವನೇಶ್ವರ ಖಲಿತಾ ಅಮಾನತುಗೊಂಡಿರುವ ಸದಸ್ಯರನ್ನು ಸದನದಿಂದ ಹೊರ ನಡೆಯುವಂತೆ ಸೂಚಿಸಿದರು. ಸದನದಲ್ಲಿ ಕೋರಂ ಇರುವಂತೆ ನೋಡಿಕೊಳ್ಳಲು ಉಳಿದ ಸದಸ್ಯರಿಗೆ ತಿಳಿಸಿದರು. ಆದರೆ ಸದಸ್ಯರು ಹೊರ ನಡೆಯದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.

ವಿಧಾನಸಭೆ ಮೊಗಸಾಲೆಯಲ್ಲಿ ಜಟಾಪಟಿ

ಬೆಂಗಳೂರು, ಸೆ. 21: ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜಟಾಪಟಿ ನಡೆದಿದೆ. ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಅನುದಾನ ಬಿಡುಗಡೆಗೆ ಸಂಬಂಧಿಸಿ ಜಟಾಪಟಿ ನಡೆದಿದೆ. ಮಧ್ಯಾಹ್ನ 12.40ರ ಸುಮಾರಿಗೆ ಸಚಿವ ನಾರಾಯಣ ಗೌಡ ಉಪಾಹಾರ ಗೃಹದತ್ತ ಬರುತ್ತಿದ್ದರು. ಆಗ ಎದುರಾದ ಶಾಸಕ ಬೆಳ್ಳಿ ಪ್ರಕಾಶ್, ತಮ್ಮ ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ಅನುದಾನ ಬಿಡುಗಡೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದು ತಿಳಿದುಬಂದಿದೆ. ಕ್ಷೇತ್ರದ ಕೆಲಸ ಮಾಡದ ನೀನು ಅಸಮರ್ಥ ಮಂತ್ರಿ. ನೀನೇನು ಅಂತಾ ಗೊತ್ತಿದೆ ಎಂದು ಬೆಳ್ಳಿ ಪ್ರಕಾಶ ಮಾತಿನ ಚಕಮಕಿ ಆರಂಭಿಸಿದ್ದಾರೆ. ಈ ವೇಳೆ ಖಾರದಿಂದಲೇ ಉತ್ತರಿಸಿರುವ ಸಚಿವರು ನಿನ್ನ ಸರ್ಟಿಫಿಕೇಟ್ ಯಾವನಿಗೆ ಬೇಕು ಹೋಗೋ ಎಂದಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು, ಸೆ. 21: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಎನ್‍ಡಿಪಿಎಸ್ ವಿಶೇಷ ಕೋರ್ಟ್ ತಾ. 24ಕ್ಕೆ ಮುಂದೂಡಿದೆ. ರಾಗಿಣಿ ಮತ್ತು ಸಂಜನಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಎನ್‍ಡಿಪಿಎಸ್ ಕೋರ್ಟ್ ಮುಂದು ಹಾಜರುಪಡಿಸಲಾಗಿತ್ತು. ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದ್ದರಿಂದ ನಟಿಯರಿಬ್ಬರಿಗೂ ಇನ್ನು ಮೂರು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ. ರಾಗಿಣಿ ಜಾಮೀನು ಅರ್ಜಿಗೆ ಸರ್ಕಾರದ ಪರ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳಿಂದ ಆಕೆಗೆ ಹಲವರ ಪರಿಚಯವಿದ್ದು, ಜಾಮೀನು ಪಡೆದು ಹೊರಬಂದಲ್ಲಿ ಅವರನ್ನೆಲ್ಲ ಎಚ್ಚರಿಸುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದರು.