ಮಡಿಕೇರಿ, ಸೆ. 20: ಹಾಕಿ ಕ್ರೀಡೆಗೆ ಸಂಬಂಧಿಸಿ ದಂತೆ ಕೊಡಗಿನಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತ್ರದಲ್ಲಿ ಸಂಚಲನವುಂಟು ಮಾಡುವ ರೀತಿಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಹುಟ್ಟು ಹಾಕುವ ಮೂಲಕ ಕೌಟುಂಬಿಕ ಹಾಕಿ ಉತ್ಸವ ಜನಕ ಎಂದೇ ಜನಜನಿತವಾಗಿರುವ ಪಾಂಡಂಡ ಎಂ. ಕುಟ್ಟಪ್ಪ ಅವರ ಸ್ಮರಣಾರ್ಥವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ.

ಮಡಿಕೇರಿಯ ವೆಲ್‍ಫೇರ್ ಅಸೋಸಿಯೇಷನ್ ಆಫ್ ಕೊಡವ ಎಂಟರ್‍ಪ್ರೀನಿಯರ್ಸ್ (ವೇಕ್) ಸಂಸ್ಥೆ ಅಕ್ಟೋಬರ್ 3ರಂದು ಈ ಕಾರ್ಯಕ್ರಮವನ್ನು ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿಸುತ್ತಿದೆ. ಹಾಕಿ ಉತ್ಸವದ ಮೂಲಕ ಕೊಡವ ಜನಾಂಗದಲ್ಲಿ ಹಾಗೂ ಜಿಲ್ಲೆಯಲ್ಲಿ ಕ್ರೀಡಾಕ್ರಾಂತಿ ಉಂಟಾಗಲು ಕಾರಣರಾಗಿದ್ದ ಕುಟ್ಟಪ್ಪ ಅವರು ಕೆಲವು ತಿಂಗಳ ಹಿಂದೆ ವಿಧಿವಶರಾಗಿದ್ದಾರೆ. ಆದರೆ ಇವರಿಗೆ ಅವರ ಸಾವಿನ ಸಂದರ್ಭದಲ್ಲಿ ಕೊರೊನಾ ಲಾಕ್‍ಡೌನ್‍ನಂತಹ ನಿಬರ್ಂಧದ ಕಾರಣದಿಂದಾಗಿ ಸೂಕ್ತ ರೀತಿಯ ಅಂತಿಮ ಗೌರವ ಸಲ್ಲಿಸಲು ಹಾಕಿ ಅಭಿಮಾನಿಗಳಿಗೆ, ವಿವಿಧ ಸಂಘ - ಸಂಸ್ಥೆಗಳಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿರು ವುದಾಗಿ ವೇಕ್‍ನ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ಕುಟ್ಟಪ್ಪ ಅವರ ಸಂಸಾರಸ್ಥರು ಮಾಜಿ ಹಿರಿಯ ಆಟಗಾರರು, ಇನ್ನಿತರ ಸಂಘ - ಸಂಸ್ಥೆಗಳ ಪ್ರಮುಖರು, ತೀರ್ಪುಗಾರರು ಸೇರಿದಂತೆ ಈತನಕ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿರುವ ಕುಟುಂಬಗಳ ಪ್ರತಿನಿಧಿಗಳು ಸೇರಿ ಸುಮಾರು 100ರಷ್ಟು ಮಂದಿ ಪಾಲ್ಗೊಳ್ಳಲಿದ್ದು, ಕೋವಿಡ್ ನಿಯಮದಂತೆ ಕಾರ್ಯಕ್ರಮ ನಡೆಸಲಾಗುವುದು. ಈ ಸಂದರ್ಭದಲ್ಲಿ ಕುಟ್ಟಪ್ಪ ಅವರ ಸೇವೆ - ಸಾಧನೆ ಹಾಗೂ ಬದುಕಿನ ಕುರಿತಾದ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆಗೊಳಿಸಲಾಗುವುದು. ಅವರ ಕುರಿತ ವಿಶೇಷ ಬಾಳೋಪಾಟ್ ಮಾದರಿಯ ಹಾಡು ಸೇರಿದಂತೆ ಇತರ ಕಾರ್ಯಕ್ರಮದೊಂದಿಗೆ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದು ದಿನೇಶ್ ತಿಳಿಸಿದ್ದಾರೆ. ಇದರೊಂದಿಗೆ ಬಾಳುಗೋಡು ವಿನಲ್ಲಿರುವ ಕೊಡವ ಸಾಂಸ್ಕøತಿಕ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ಅವರ ಪ್ರತಿಮೆಯೊಂದನ್ನು ಸ್ಥಾಪಿಸಿ ಇವರ ಬಗ್ಗೆ ಯುವ ಜನಾಂಗಕ್ಕೆ ಸದಾ ಪ್ರೇರಣೆಯಾಗುವಂತೆ ಮಾಡುವ ನಿಟ್ಟಿನಲ್ಲೂ ಚಿಂತನೆ ಇದ್ದು, ಕೇಂದ್ರದ ಪ್ರಮುಖರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.