ಮಡಿಕೇರಿ, ಸೆ. 20: ಅಕ್ರಮವಾಗಿ ಲಾರಿಯಲ್ಲಿ ಮೂರು ಲಕ್ಷ ಮೌಲ್ಯದ ಹೆಬ್ಬಲಸು ಮರದ ನಾಟಾಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ, ಲಾರಿ ಹಾಗೂ ಮರವನ್ನು ವಶಪಡಿಸಿಕೊಂಡಿದೆ.
ಮಡಿಕೇರಿ ತಾಲೂಕು ಪಾಲೂರು ಗ್ರಾಮದ ಮಂದನೆರವಂಡ ಮನು ಎಂಬವರ ಮನೆಯ ಅಂಗಳದಲ್ಲಿ ಅಕ್ರಮವಾಗಿ ಸಂಗ್ರಹಿಸಿ, ಲಾರಿ (ಕೆಎ-19, ಸಿ-7612)ನಲ್ಲಿ ಸಾಗಿಸಲು ಯತ್ನಿಸುತ್ತಿದ್ದ 30 ನಾಟಾಗಳಿಂದ 7.207 ಘ.ಮೀ. ನಾಟಾಗಳನ್ನು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನದಲ್ಲಿ ಪತ್ತೆಹಚ್ಚಲಾಗಿದ್ದು, ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಸಿಂಧೆ ಹಾಗೂ ವಲಯ ಅರಣ್ಯಾಧಿಕಾರಿಗಳಾದ ಎಸ್. ಸುಮಿತ್ರ, ಶ್ರೀನಿವಾಸ ನಾಯಕ, ಕಳ್ಳೀರ ಎಂ. ದೇವಯ್ಯ (ಪ್ರಭಾರ), ಮೂರ್ನಾಡು ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಆನಂದ ಜಯಗೌಡರ, ಬಾಬು ರಾಠೋಡ, ಮಯೂರ್ ಕಾರವೇಕರ ಹಾಗೂ ಅರಣ್ಯ ರಕ್ಷಕರಾದ ರವಿಕುಮಾರ್, ಗಣಪತಿ ನಾಯಕ್, ಸಂದೇಶ, ಸಿಬ್ಬಂದಿಗಳಾದ ಪ್ರವೀಣ, ಗಣೇಶ, ವಾಸು, ಸುಧಾ, ಶರತ್, ದಿನೇಶ, ಚಂದ್ರಶೇಖರ, ವಾಹನ ಚಾಲಕರಾದ ಶ್ಯಾಮ್ ಹಾಗೂ ಕುಶನ್ ಪಾಲ್ಗೊಂಡಿದ್ದರು.