ವೀರಾಜಪೇಟೆ, ಸೆ. 20: ಪಕ್ಷದ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಅಸಮಾಧಾನ ಉಂಟಾದರೆ ಅದನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು. ಮುಂದಿನ ಎಲ್ಲಾ ಚುನಾವಣೆಗಾಗಿ ಕಾರ್ಯಕರ್ತರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಕ್ಷೇತ್ರದಲ್ಲಿ ಪಕ್ಷದ ಬಲಿಷ್ಠ ಸಂಘಟನೆಗಾಗಿ ಪ್ರಯತ್ನ ಮಾಡಬೇಕು ಎಂದು ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಂ.ಬಿ.ಗಣೇಶ್ ತಿಳಿಸಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಇಲ್ಲಿನ ಪುರಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜೆ.ಡಿ.ಎಸ್.ಪಕ್ಷದ ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಣೇಶ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತದಲ್ಲಿ ಮಾಡಿರುವ ಜನಪರ ಯೋಜನೆಗಳು ಈಗಿನ ಬಿಜೆಪಿ ಸರಕಾರಕ್ಕೆ ಪ್ರೇರಣೆಯಾಗಬೇಕು ಕುಮಾರಸ್ವಾಮಿ ಅವರ ಯೋಜನೆಗಳು, ಸಾಧನೆಯನ್ನು ರೈತ ವರ್ಗ ಸೇರಿದಂತೆ ಸಮಾಜದ ಕಟ್ಟ ಕಡೆಯ ಸಾಮಾನ್ಯ ಮನುಷ್ಯನು ಸ್ಮರಿಸುವಂತಾಗಿದೆ ಎಂದರು.

ಪಕ್ಷದ ರಾಜ್ಯ ಸಮಿತಿಯ ಉಪಾಧ್ಯಕ್ಷ ಮನೋಜ್ ಬೊಪಯ್ಯ ಮಾತನಾಡಿ ಜೆಡಿಎಸ್ ಪಕ್ಷ ಪ್ರಾಮಾಣಿಕ ಪ್ರಯತ್ನದಿಂದ ಈ ಮಟ್ಟಕ್ಕೆ ತಲುಪಿದೆ. ಕೊರೊನಾ ವೈರಸ್ ಸೋಂಕು ನಿಯಂತ್ರಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಹೇಳಿದರು.

ಪಕ್ಷದ ರಾಜ್ಯ ಸಮಿತಿಯ ಅಲ್ಪ ಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ ಮುಂದಿನ ಚುನಾವಣೆಗೆ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ಇದೇ ಸಂದರ್ಭ ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಪಿ.ಎ.ಮಂಜುನಾಥ್ ಅವರಿಗೆ ಆದೇಶ ಪತ್ರ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ ತಾಲೂಕಿನಾದ್ಯಂತ ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.

ಸಭೆಯನ್ನುದ್ದೇಶಿಸಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಇಸಾಕ್ ಖಾನ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಯೂಸೂಫ್, ಅಲ್ಪಸಂಖ್ಯಾತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುಬೀನ, ತಾಲೂಕು ಅಧ್ಯಕ್ಷೆ ರುಬೀನಾ ಭಾನು, ಜಿಲ್ಲಾ ಎಸ್.ಟಿ.ಘಟಕದ ಎಚ್.ವಿ.ಜಯ, ರಾಜ್ಯ ಸಮಿತಿಯ ಷರೀಫ್, ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಎಚ್.ಗಣೇಶ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಮಾತನಾಡಿ ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತದ ಮೇಲೆ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕು ಎಂದರು.

ವೇದಿಕೆಯಲ್ಲಿ ಪಕ್ಷದ ಮಡಿಕೇರಿ ತಾಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ಪರಮಾಲೆ, ಪೊನ್ನಂಪೇಟೆ ತಾಲೂಕು ಯುವ ಅಧ್ಯಕ್ಷ ಕಾಣತಂಡ ಜೀವನ್, ಸಾಮಾಜಿಕ ಜಾಲತಾಣದ ಸಂಚಾಲಕ ರಾಕೇಶ್ ಬಿದ್ದಪ್ಪ, ಜಿಲ್ಲಾ ಉಪಾಧ್ಯಕ್ಷ ಶಿವದಾಸ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಹನೀಫ್ ಕಾರ್ಕಾಡ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್ ಉಪಸ್ಥಿತರಿದ್ದರು.

ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಜಾಸಿರ್ ಸ್ವಾಗತಿಸಿದರು. ಚೋಕಂಡಳ್ಳಿ ಮಜೀದ್ ನಿರೂಪಿಸಿದರು. ಜಿಲ್ಲಾ ಸಾಮಾಜಿಕ ಜಾಲ ತಾಣದ ಸೈಫ್‍ಅಲಿ ವಂದಿಸಿದರು.