ಸಿದ್ದಾಪುರ, ಸೆ. 20: ವಿಶ್ವ ಕರ್ಮ ಸೇವಾ ಸಂಘ ವೀರಾಜಪೇಟೆ ವತಿಯಿಂದ 19ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆಯನ್ನು ವೀರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಬೆಳಗ್ಗಿನಿಂದ ಗಣಪೂಜೆ ಮತ್ತು ವಿವಿಧ ಪೂಜೆ ಕೈಂಕರ್ಯಗಳು ಮಂಗಳೂರಿನ ಪುರೋಹಿತರಿಂದ ನೆರವೇರಿತು. ಕೋವಿಡ್ ಹಿನೆÀ್ನಲೆಯಲ್ಲಿ ಸರಳ ರೀತಿಯಲ್ಲಿ ಆರಂಭಗೊಂಡ ಪೂಜೆ ಮತ್ತು ಸೇವೆಗಳು ಸೇವಾ ಸಂಘದ ಅಧ್ಯಕ್ಷ ಕೆ.ಜಿ.ದಿವಾಕರ್ ಆಚಾರ್ಯ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಿವಾಕರ್ ಆಚಾರ್ಯ ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದುದು. ವಿಶ್ವಕರ್ಮ ಸಮುದಾಯದವರು ನಾಡಿನ ಎಲ್ಲೆಡೆ ವಾಸವಾಗಿದ್ದು, ರಕ್ತಗತವಾಗಿ ಬಂದ ವಿದ್ಯೆಗಳನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಕಾರ್ಯವಾಗಬೇಕೆಂದು ಕಿವಿಮಾತು ಹೇಳಿದರು. ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳು ಸಮುದಾಯದವರಿಗೆ ಲಭಿಸಿದಲ್ಲಿ ಸಮಾಜವು ಉನ್ನತೀಕರಣಗೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಯ ಮೂಲಕ ಸೇವಾ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯರು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸೇವಾ ಸಂಘದ ಉಪಾಧ್ಯಕ್ಷ ಎ.ಎ. ವಾಗೀಶ ಆಚಾರ್ಯ, ಕೆ.ಜೆ. ರವೀಂದ್ರ ಆಚಾರ್ಯ, ಪ್ರಧಾನ ಕಾರ್ಯದÀರ್ಶಿ ಕೆ.ಜೆ ರಾಜೇಶ್ ಆಚಾರ್ಯ, ಸಹ ಕಾರ್ಯದರ್ಶಿಗಳಾದ ಎ.ಎ. ಭವಾನಿ ಶಂಕರ್ ಆಚಾರ್ಯ, ಟಿ.ಎಸ್. ಮಂಜುನಾಥ್ ಆಚಾರ್ಯ. ವಿಮಲ ದಶರಥ, ಎ.ಪಿ.ಲೋಕೇಶ್ ಆಚಾರ್ಯ ಹಾಗೂ ಇನ್ನಿತರರು ಹಾಜರಿದ್ದರು.