ಮಡಿಕೇರಿ, ಸೆ. 20: ಭೌಗೋಳಿಕವಾಗಿ ವಿಭಿನ್ನವಾಗಿರುವ ರಾಜ್ಯದ ಇನ್ನಿತರ ನಗರ- ಪಟ್ಟಣ ಪ್ರದೇಶಗಳಿಗಿಂತ ಬೇರೆಯದ್ದೇ ರೀತಿಯ ಚಟುವಟಿಕೆಗಳಿಂದ ಕೂಡಿರುವ ಜಿಲ್ಲೆಯಲ್ಲಿ ಕೊರೊನಾದ ಆತಂಕದ ಪರಿಸ್ಥಿತಿ ಈ ಬಗ್ಗೆ ಇದ್ದ ಸರಕಾರದ ಹಲವು ನಿರ್ಬಂಧಗಳು ಸಡಿಲಿಕೆಯಾದರೂ ಇನ್ನೂ ಚೇತರಿಕೆ ಕಾಣದಂತಾಗಿದೆ. ಕೊರೊನಾ ಎಂಬ ಈ ವರ್ಷದ ದುರಂತದ ಆತಂಕ ಇನ್ನೂ ಜನತೆಯನ್ನು ಕಾಡುತ್ತಿರುವುದು ಒಂದೆಡೆಯಾದರೆ, ಜಿಲ್ಲೆಯಲ್ಲಿ ಮತ್ತೂ ಮುಂದುವರಿಯುತ್ತಿರುವ ಮಳೆಯ ಸನ್ನಿವೇಶದಿಂದಾಗಿ ಎಲ್ಲವೂ ನೀರಸವಾಗಿದೆ.ಮಾರ್ಚ್ ತಿಂಗಳಿನಿಂದ ದೇಶವ್ಯಾಪಿಯಾಗಿ ವಿಧಿಸಲಾದ ಲಾಕ್‍ಡೌನ್ ನಿಯಮ, ಅಂತರ ರಾಜ್ಯಗಳ ಸಂಪರ್ಕ ಕಡಿತ ಸೇರಿದಂತೆ ಕೊರೊನಾವನ್ನು ಎದುರಿಸಲು ಕೇಂದ್ರ - ರಾಜ್ಯ ಸರಕಾರಗಳು ವಿಧಿಸಿದ್ದ ಹಲವು ಕ್ರಮಗಳನ್ನು ಇದೀಗ ಸಡಿಲಿಕೆ ಮಾಡಲಾಗಿದ್ದು, ಸಹಜ ಜನಜೀವನ ಹಾಗೂ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರಮುಖವಾಗಿ ಇದಕ್ಕೆ ಜನತೆಯಿಂದಲೇ ಸ್ಪಂದನ ದೊರೆಯದಂತಹ ವಾತಾವರಣ ಜಿಲ್ಲೆಯಾದ್ಯಂತ ಕಂಡುಬರುತ್ತಿದೆ. ಸರಕಾರಿ - ಖಾಸಗಿ ಬಸ್‍ಗಳ ಓಡಾಟಕ್ಕೆ ಮುಕ್ತ ಅವಕಾಶವಿದೆ. ಆದರೆ, ಪ್ರಯಾಣಿಕರೇ ಬರುತ್ತಿಲ್ಲ. ಈ ಕಾರಣಕ್ಕೆ ಕೆಲವೇ ಕೆಲವು ಸರಕಾರಿ ಬಸ್‍ಗಳು ಮಾತ್ರಓಡಾಡುತ್ತಿವೆ. ಜಿಲ್ಲೆಯಲ್ಲಿ ಬಹುತೇಕ ಖಾಸಗಿ ಬಸ್‍ಗಳ (ಮೊದಲ ಪುಟದಿಂದ) ಸೇವೆಯೇ ಪ್ರಮುಖ ವಾಗಿದ್ದು, ಪ್ರಸ್ತುತ 150 ಖಾಸಗಿ ಬಸ್‍ಗಳ ಪೈಕಿ 15ರಿಂದ 20 ಬಸ್‍ಗಳು ಮಾತ್ರ ರಸ್ತೆಗಿಳಿದಿವೆ. ಇನ್ನಿತರ ಬಾಡಿಗೆ ವಾಹನಗಳ ಓಡಾಟವೂ ಬಹುತೇಕ ನಿಂತಂತೆಯೇ ಇದೆ. ಅಂಗಡಿ - ಮುಂಗಟ್ಟುಗಳು ಮುಕ್ತವಾಗಿ ವ್ಯಾಪಾರ ನಡೆಸುತ್ತಿವೆಯಾದರೂ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಳ್ಳುವ ಮಂದಿ ಮತ್ತೆ ತ್ವರಿತವಾಗಿ ಮನೆಗೆ ಮರಳುವುದರಿಂದ ಅಪರಾಹ್ನದ ನಂತರ ನಗರ - ಪಟ್ಟಣ ಪ್ರದೇಶಗಳೂ ಖಾಲಿಯಾಗಿರುತ್ತವೆ. ಖಾಸಗಿ ಬಸ್ ಮಾಲೀಕರಲ್ಲೊಬ್ಬರಾದ ಗೋಣಿ ಕೊಪ್ಪಲುವಿನ ಕಾಡ್ಯಮಾಡ ಗೌತಮ್ ಅವರ ಪ್ರಕಾರ ಇದೀಗ ಮಾರ್ಚ್ - ಏಪ್ರಿಲ್‍ನಲ್ಲಿದ್ದಂತಹ ಭಾರೀ ಭೀತಿಯ ಪರಿಸ್ಥಿತಿ ಇಲ್ಲವಾ ದರೂ ಜನತೆಯಲ್ಲಿ... ಅವರವರ ಕುಟುಂಬದಲ್ಲಿ ಈ ಕೊರೊನಾದ ಆತಂಕದ ಕರಿಛಾಯೆ ಹಾಗೆಯೇ ಉಳಿದಿದೆ. ಹೆಚ್ಚು ಜನಸಂದಣಿ ಯಾಗುವ ಪ್ರದೇಶಕ್ಕೆ ಜನತೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಸಭೆ - ಸಮಾರಂಭಗಳಾಗಲಿ, ಶಾಲಾ - ಕಾಲೇಜುಗಳಾಗಲಿ ನಡೆಯದಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಜನರು ಬಹುತೇಕ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ವಿವಿಧ ರೀತಿಯ ಕೆಲಸಗಾರರು ಕೂಡ ತಮ್ಮ ಮುಕ್ತ ಕಾರ್ಯನಿರ್ವಹಣೆಗೆ ಅವ್ಯಕ್ತ ಭಯವನ್ನು ಕಾಣುವಂತಾಗಿದೆ. ತಮ್ಮದೇ ಅನುಭವದಂತೆ ಬಸ್‍ನ ಸಿಬ್ಬಂದಿಗಳು ಕೆಲಸಕ್ಕೆ ಬರಲು ಉತ್ಸುಕತೆ ತೋರಿದರೂ ಅವರ ಮನೆಯಲ್ಲಿ ಪತ್ನಿ - ಮಕ್ಕಳು ಅವರನ್ನು ಬೇಡವೆಂಬಂತೆ ತಡೆಯುತ್ತಿರುವ ಉದಾಹರಣೆಗಳೂ ಇವೆ. ಕೆಲಸ ಇಲ್ಲದಿದ್ದರೂ ಪರವಾಗಿಲ್ಲ... ವೃಥಾ ತೊಂದರೆಯೇಕೆ ಎಂಬಂತೆ ಭಾವನೆ ಜನತೆಯಲ್ಲಿ ಆವರಿಸಿದ್ದು, ಇದರಿಂದಾಗಿ ಸಂಚಾರ ವ್ಯವಸ್ಥೆಯಾಗಲಿ, ವಾಣಿಜ್ಯ ಚಟುವಟಿಕೆಯಾಗಲಿ ನೀರಸವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೊಂದು ಗಮನಾರ್ಹ ಅಂಶವೆಂದರೆ ಸಣ್ಣ - ಪುಟ್ಟ ತೊಂದರೆಗಳಿಗೆ ಕೂಡ ಜನತೆ ಆಸ್ಪತ್ರೆಗೂ ತೆರಳಲು ಹಿಂಜರಿಯುತ್ತಿದ್ದಾರೆ. ಹೋದವರಿಗೆ ಕೊರೊನಾ ಖಚಿತ ಎಂಬಂತ ವರದಿ ಬಂದೇ ಬರುತ್ತದೆ ಎಂಬ ಭಾವನೆ ಮೂಡಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಹಲವರು. ನಗರ - ಪಟ್ಟಣಕ್ಕೆ ಗ್ರಾಮೀಣ ಪ್ರದೇಶದಿಂದ ಜನರು ಬೆಳಗ್ಗಿನ ಹೊತ್ತು ತಮ್ಮ ಕೆಲವೊಂದು ಅಗತ್ಯತೆಗಳಿಗೆ ಬಂದರೂ ಮಧ್ಯಾಹ್ನದ ಊಟಕ್ಕೆ ಮನೆ ಸೇರಿ ಬಿಡುತ್ತಾರೆ. ಅಪರಾಹ್ನದ ಬಳಿಕ ಅಂಗಡಿಗಳ ಮಾಲೀಕರು ಹಾಗೂ ಅವರ ವಾಹನಗಳಷ್ಟೆ ಇಲ್ಲಿ ಉಳಿದಿರುತ್ತವೆ ಎಂದು ಗೌತಮ್ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಜಿಲ್ಲೆಯಾದ್ಯಂತ ಮಳೆಗಾಲದ ಸನ್ನಿವೇಶ ಕೂಡ ಮತ್ತೆ ಮತ್ತೆ ಮುಂದುವರೆಯುತ್ತಿರುವುದು ಕೂಡ ಸಹಜತೆಯ ವಾತಾವರಣ ಸೃಷ್ಟಿಯಾಗಲು ಮತ್ತೊಂದು ಅಡಚಣೆ ಎಂಬಂತಾಗಿದೆ. ಪ್ರವಾಸಿಗರಿಗೆ ಮುಕ್ತ ಅವಕಾಶವಿದ್ದರೂ, ಅವರು ಕೂಡ ತಮ್ಮದೇ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಇತರ ಉದ್ಯಮಿಗಳಿಗೆ ಹೆಚ್ಚು ಪ್ರಯೋಜನವಿಲ್ಲ. ಸರಕಾರಿ ಕಚೇರಿ ಕೆಲಸ ಕಾರ್ಯಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಚಟುವಟಿಕೆಗಳೂ ಈ ಹಿಂದಿನಂತೆ ಮುಂದುವರಿಯದ ಕಾರಣ, ಎಲ್ಲವೂ ‘ಶೂನ್ಯ’ ಎಂಬ ಸನ್ನಿವೇಶವೇ ಸದ್ಯದ ಪರಿಸ್ಥಿತಿಯಾಗಿ ಕಂಡುಬರುತ್ತಿದೆ.

ಕೆ.ಎಸ್.ಆರ್.ಟಿ.ಸಿ.ಯ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ ಅವರು ಪ್ರತಿಕ್ರಿಯಿಸಿ ಪ್ರಸ್ತುತ ಬಹುತೇಕ ಬಸ್‍ಗಳನ್ನು ಓಡಿಸಲಾಗುತ್ತಿದೆಯಾದರೂ, ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ನಗರ - ಪಟ್ಟಣಗಳಲ್ಲಿ ಒಂದಷ್ಟು ದಿನದ ಸಂಗ್ರಹಾತಿಯಾದರೂ ಗ್ರಾಮೀಣ ಭಾಗದಲ್ಲಿ ನಷ್ಟದಲ್ಲೇ ಸಂಚರಿಸಬೇಕಾಗಿದೆ ಎಂದು ಹೇಳಿದರು. ಕೊರೊನಾದ ಚರ್ಚೆ ಈ ಹಿಂದಿನಂತೆ ಇಲ್ಲವಾಗಿದ್ದರೂ ಜಿಲ್ಲೆಯಲ್ಲಿ ದಿನಂಪ್ರತಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಸಾವು ಪ್ರಕರಣ ಕೂಡ 30ರ ಗಡಿ ದಾಟಿರುವುದು ಜನತೆ ಸ್ವಯಂ ನಿಯಂತ್ರಣ ಮಾಡಿಕೊಳ್ಳಲು ಮತ್ತೊಂದು ಕಾರಣವೆನ್ನಲಾಗುತ್ತಿದೆ.