ಕೊಡಗನ್ನು ಹಾಲೇರಿ ರಾಜವಂಶಸ್ಥರಾದ ದೊಡ್ಡವೀರರಾಜೇಂದ್ರ ರಾಜ ಆಳುತ್ತಿದ್ದ ಕಾಲವದು. ಅಂದಾಜು 1760 ರಿಂದ 1780 ರ ಸಮಯವಿರಬಹುದು. ಆಗ ಭಾಗಮಂಡಲ ಮತ್ತು ಅದರ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಪ್ಲೇಗ್, ಕಾಲರ, ಸಿಡುಬು ರೋಗಗಳಂತ ಮಹಾ ಕಾಯಿಲೆಗಳು ಬಂದು ಅಪಾರ ಪ್ರಮಾಣದ ಸಾವು ನೋವುಗಳಾಗಿದ್ದು, ಅಳಿದುಳಿದವರು ಸಂಪೂರ್ಣವಾಗಿ ಊರನ್ನು ಖಾಲಿ ಮಾಡಿ ಕೊಡಗಿನ ಇತರ ಭಾಗಗಳಿಗೆ ಹೋಗಿ ನೆಲೆನಿಂತರು. ಆ ಸಂದರ್ಭದಲ್ಲಿ ಭಾಗಮಂಡಲ ಮತ್ತು ಅದರ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಜನರಿಲ್ಲದೆ ಕೃಷಿ ಭೂಮಿಗಳು ಪಾಳು ಬಿದ್ದಿದ್ದವು. ಅಲ್ಲದೆ, ಕೊಡಗಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಪುನಸ್ಕಾರಗಳು ನಿಂತು ಹೋಗಿದ್ದವು. ಇದನ್ನು ಅರಿತ ಅಂದಿನ ಕೊಡಗಿನ ರಾಜ ದೊಡ್ಡವೀರರಾಜೇಂದ್ರರು ಅಂದಿನ ಮತ್ತು ಇಂದಿನ ಕೊಡಗಿನ ಭಾಗವೇ ಆಗಿರುವ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನೆಲೆ ನಿಂತಿದ್ದ ಕೋಡಿ ಕುಟುಂಬದ ಕೆಲವರನ್ನು ಕರೆತಂದು ಅವರಿಗೆ ಶ್ರೀ ತಲಕಾವೇರಿ ದೇವಾಲಯದ ಜವಾಬ್ದಾರಿಕೆಯನ್ನು ವಹಿಸಿ ತಾಮ್ರದ ಹಾಳೆಯಲ್ಲಿ ಆದೇಶ ನೀಡಿ, ದೇವಾಲಯದ ಚಿನ್ನಾಭರಣಗಳ ರಕ್ಷಣೆಗಾಗಿ ರಾಜನ ಗುರುತಿರುವ ಖಡ್ಗವನ್ನು ನೀಡಿದ್ದು, ಅದರ ಎರಡು ಬದಿಗಳಲ್ಲಿ ‘ವಿ’ ಎಂದು ಕೆತ್ತಿರುವ ಗುರುತಿದೆ. ಇಂದಿಗೂ ಆ ಖಡ್ಗವು ಕೋಡಿ ಕುಟುಂಬದ ಸ್ವಾಧೀನದಲ್ಲಿದೆ.
ತಲತಲಾಂತರಗಳಿಂದ ಶ್ರೀ ತಲಕಾವೇರಿ ದೇವಾಲಯದಲ್ಲಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯದಂತೆ ನಮ್ಮ ಕುಟುಂಬಸ್ಥರು ಒಮ್ಮತದಿಂದ ತೀರ್ಮಾನಿಸಿ ನಿಯೋಜಿಸಲ್ಪ ಡುವ ನಮ್ಮ ಕುಟುಂಬದವ ರೊಬ್ಬರು ಶ್ರೀ ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಅವರಿಗೆ ಸಹಾಯಕರಾಗಿ ಕುಟುಂಬದ ಹಲವರು ಸಹಕರಿಸುತ್ತಾರೆ.
ಸ್ವಾತಂತ್ರ್ಯದ ಪೂರ್ವದಲ್ಲಿ ತಲಕಾವೇರಿ ದೇವಾಲಯದ ಸ್ಥಿರ ಮತ್ತು ಚರ ಆಸ್ತಿಗಳ ಜಬಾಬ್ದಾರಿ ಮತ್ತು ಉತ್ಸವಗಳ ಜವಾಬ್ದಾರಿ ಕೋಡಿ ಕುಟುಂಬದ ದೇವತಕ್ಕರಿಗಿತ್ತು. ಆದರೆ, ಸ್ವಾತಂತ್ರ್ಯದ ನಂತರ ದೇವಾಲಯದ ಆಡಳಿತ ವ್ಯವಸ್ಥೆ ಸರ್ಕಾರದ ಸುಪರ್ದಿಗೆ ಹೋದ ನಂತರ ಸಂಪ್ರದಾಯದಂತೆ ಆಭರಣಗಳನ್ನು ತೊಡಿಸುವ ಮತ್ತು ಸಾಂಪ್ರದಾಯಿಕ ಕಟ್ಟುಪಾಡುಗಳ ಅನುಸರಣೆ ದೇವತಕ್ಕರ ಜವಾಬ್ದಾರಿಯಾಗಿರುತ್ತದೆ.
ತಲಕಾವೇರಿ ಜಾತ್ರೆಗೆ ಕಟ್ಟು ಬೀಳುವ ಮೊದಲು ಪತ್ತಾಯಕ್ಕೆ ಅಕ್ಕಿ ಹಾಕುವುದು, ಗೊನೆ ಕಡಿಯುವುದು, ನಂದಾದೀಪ ಹಚ್ಚುವುದು ಮತ್ತು ಅಕ್ಷಯ ಪಾತ್ರೆ ಇಡುವುದು. ಈ ಎಲ್ಲಾ ದೇವತಾ ಕಾರ್ಯಗಳಲ್ಲಿ ದೇವತಕ್ಕರು ಸಾಂಪ್ರದಾಯಿಕ ಉಡುಪಿನಲ್ಲಿದ್ದು, ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಶ್ರೀ ತಲಕಾವೇರಿ ಜಾತ್ರೆಯ ಎರಡು ದಿನಗಳ ಮುಂಚಿತವಾಗಿ ಭಾಗಮಂಡಲದ ಖಜಾನೆಯಲ್ಲಿರುವ ಕಾವೇರಿ ಮಾತೆಗೆ ತೊಡಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣ ಗಳನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಯವರು ಕೋಡಿ ಕುಟುಂಬದ ದೇವ ತಕ್ಕರ ಸ್ವಾಧೀನಕ್ಕೆ ವಹಿಸುತ್ತಾರೆ. ಆ ಚಿನ್ನಾಭರಣ ಗಳಿಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಿದ ನಂತರ ಕೋಡಿ ಕುಟುಂಬದ ದೇವತಕ್ಕರ ನೇತೃತ್ವದಲ್ಲಿ ಕುಟುಂಬಸ್ಥರು, ಊರಿನವರು ಮತ್ತು ಕಾವೇರಿ ಮಾತೆಯ ಭಕ್ತಾದಿಗಳು ಜೊತೆಗೂಡಿ ಭಾಗಮಂಡಲ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಆ ನಂತರ ತಲಕಾವೇರಿಗೆ ಕೊಂಡೊಯ್ಯಲಾಗುವುದು. ಆ ನಂತರ ಜಾತ್ರಾದಿನ ದಂದು ದೇವಾಲಯ ಶುದ್ಧೀಕರಣಗೊಂಡ ನಂತರ ಶ್ರೀ ಮಾತೆಗೆ ಚಿನ್ನಾಭರಣಗಳನ್ನು ತೊಡಿಸಲಾಗುವುದು.
ಇದೇ ರೀತಿ ಕಿರು ಸಂಕ್ರಮಣದವರೆಗೂ ಒಂದು ತಿಂಗಳ ಕಾಲ ಪ್ರತಿ ನಿತ್ಯ ಪ್ರಾತ: ಕಾಲದಲ್ಲಿ ದೇವಿಗೆ ಚಿನ್ನಾಭರಣ ತೊಡಿಸಿ ಸಂಜೆ ತೆಗೆದಿರಿಸಲಾಗುವುದು. ಒಂದು ತಿಂಗಳ ಕಾಲ ಕೋಡಿ ಕುಟುಂಬಸ್ಥರಿಗಾಗಿ ಕಾದಿರಿಸಿರುವ ಕೊಠಡಿಯಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಕೋಡಿ ಕುಟುಂಬದ ತಕ್ಕ ಮುಖ್ಯಸ್ಥರು ತಲಕಾವೇರಿಯಲ್ಲಿ ತಂಗಬೇಕಾಗಿದೆ. ಒಂದು ತಿಂಗಳ ನಂತರ ಕಿರು ಸಂಕ್ರಮಣ ಕಳೆದ ನಂತರ ಸಕಲ ಚಿನ್ನಾಭರಣಗಳನ್ನು ತಲಕಾವೇರಿಯಿಂದ ಭಾಗಮಂಡಲಕ್ಕೆ ತಂದು ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ.
ಜಾತ್ರೆಯ ದಿನದಂದು ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಬರುವ ಮುಂಚಿತವಾಗಿ ಕುಂಡಿಕೆಯ ಸುತ್ತಮುತ್ತಲೂ ಕುಟುಂಬಸ್ಥರು ಶುಚಿ ಮಾಡಬೇಕು. ಆ ನಂತರ ಬ್ರಾಹ್ಮಣರು ಪೂಜೆ ಪ್ರಾರಂಭಿಸುವ ಮೊದಲು ಕೋಡಿ ಕುಟುಂಬಸ್ಥರು ಕ್ಷೇತ್ರದಲ್ಲಿ ಕೊಬ್ಬರಿ ಕಾಯಿಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಪೂಜೆ ಸಂಪನ್ನವಾಗುವುದಕ್ಕಿಂತ ಮುಂಚೆ ಕೋಡಿ ಕುಟುಂಬದಿಂದ ಆಗತಾನೇ ಕರೆದು ತಂದಂತ ಹಸುವಿನ ಹಸಿ ಹಾಲನ್ನು ಕುಂಡಿಕೆಗೆ ಹಾಕಲು ನೀಡಬೇಕು. ಆ ಆಚಾರ ವಿಚಾರಗಳು ಇಂದಿಗೂ ತಲಕಾವೇರಿಯಲ್ಲಿ ಕೋಡಿ ಕುಟುಂಬಸ್ಥರಿಂದ ನಡೆದುಕೊಂಡು ಬರುತ್ತಿದೆ.
ಈ ಮೇಲಿನ ಬಗ್ಗೆ ನಮ್ಮ ಕಟುಂಬದ ಹಿರಿಯರು ತಲಕಾವೇರಿ ದೇವಾಲಯದಲ್ಲಿ ದೇವತಕ್ಕರಾಗಿ ಕಾರ್ಯ ನಿರ್ವಹಿಸಿದ್ದ ದಿವಂಗತ ಕೋಡಿ ಚಂಗಪ್ಪ, ನನ್ನ ಅಜ್ಜ ದಿವಂಗತ ಕೋಡಿ ಸುಬ್ಬಯ್ಯ ಆಗ ಮತ್ತು ಶ್ರೀ ತಲಕಾವೇರಿ ದೇವಾಲಯದ ಇಂದಿನ ದೇವತಕ್ಕರಾದ ಕೋಡಿ ಮೋಟಯ್ಯ ಅವರು ಈಗ ಮಾಹಿತಿ ನೀಡಿದ್ದಾರೆ.
-ಕೋಡಿ ಚಂದ್ರಶೇಖರ್
ಶ್ರೀ ಭಗಂಡೇಶ್ವರ ಮತ್ತು ಶ್ರೀ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಯ
ಮಾಜಿ ಸದಸ್ಯ. ಮೊ: 9448588050