ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ರಾಜಪರಂಪರೆಯ ಆಳ್ವಿಕೆಯ ಕಾಲಘಟ್ಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಸಾಧುಗಳು ತಲಕಾವೇರಿ ಕ್ಷೇತ್ರ ದರ್ಶನಕ್ಕೆ ಬಂದರೆ, ಅಂಥವರಿಗೆ ದಾಸೋಹ ಹಾಗೂ ವಸತಿಗಾಗಿ ಭಾಗಮಂಡಲದಲ್ಲಿ ಒಂದು ಜಂಗಮ ಮಠ ಇದ್ದುದು ಗೋಚರಿಸಿದೆ. ಪ್ರಸ್ತುತ ಭಾಗಮಂಡಲದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅನತಿ ದೂರದಲ್ಲಿ ಈ ಜಂಗಮ ಮಠದ ಕುರುಹು ಕಂಡು ಬರಲಿದೆ.

ಅಲ್ಲಿ ಏಕೈಕ ಲಿಂಗಾಯಿತ ಅಥವಾ ವೀರಶೈವ ಪರಂಪರೆಗೆ ಸೇರಿದ ರೈತ ಕುಟುಂಬ ಇಂದಿಗೂ ವಾಸವಿದೆ. ಈ ಕುಟುಂಬದ ಯಜಮಾನ ಜೆ. ನಂಜುಂಡಪ್ಪ ಅವರ ಪ್ರಕಾರ ಕೊಡಗಿನ ಲಿಂಗಾಯಿತ ರಾಜರ ಆಳ್ವಿಕೆಯ ಕಾಲಘಟ್ಟದಲ್ಲಿ ಈ ಜಂಗಮ ಮಠ ಸಮೃದ್ಧಗೊಂಡು ಜನಾಂಗದ ಸಂತರ ಸಹಿತ ಯಾತ್ರಾರ್ಥಿಗಳಿಗೆ ಆತಿಥ್ಯ ನೀಡಲಾಗುತ್ತಿತ್ತಂತೆ. ವರ್ಷಗಳು ಉರುಳಿದಂತೆ ಕೊಡಗು ರಾಜರ ಆಳ್ವಿಕೆ ಕೊನೆಗೊಂಡು; ಬ್ರಿಟಿಷ್ ಶಾಹಿತ್ವ ಸ್ಥಾಪನೆಯಿಂದಾಗಿ; ಕೊಡಗಿನ ಉದ್ದಗಲಕ್ಕೂ ಇದ್ದಂತಹ ಇಂಥ 64ಕ್ಕೂ ಅಧಿಕ ಮಠಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ನಾಶ ಹೊಂದುವಂತಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.

ಆ ಕಾಲಮಾನದಲ್ಲಿ ನೇಪಾಳದಲ್ಲಿರುವ ಶ್ರೀಶೈಲ ಕ್ಷೇತ್ರ ಸೇರಿದಂತೆ, ಭಾರತದ ಮೋಕ್ಷ ಪ್ರದಾಯಿನಿ ಕಾಶೀ ಕ್ಷೇತ್ರ ಮೊದಲ್ಗೊಂಡು ಜಂಗಮ ಸಾಧುಗಳು ಸಂಚರಿಸುತ್ತಾ ಕೊಡಗಿನಲ್ಲಿ ಕಾವೇರಿ ತೀರ್ಥಯಾತ್ರೆ ಕೈಗೊಂಡಾಗ ಭಾಗಮಂಡಲದಲ್ಲಿ ವಿಶ್ರಾಂತಿಯೊಂದಿಗೆ ಆತಿಥ್ಯ ಪಡೆಯುತ್ತಿದ್ದರಂತೆ. ಬದಲಾದ ಪರಿಸ್ಥಿತಿಯಲ್ಲಿ ಕೊಡಗಿನ ನಾಪೋಕ್ಲು, ಅಪ್ಪಂಗಳ, ಮೂರ್ನಾಡು, ಭಾಗಮಂಡಲ ಸೇರಿದಂತೆ ಪುಷ್ಪಗಿರಿಯಿಂದ ದಕ್ಷಿಣದ ಇರ್ಪು ರಾಮೇಶ್ವರ ಸನಿಹದ ಬ್ರಹ್ಮಗಿರಿ ತನಕ ಹರಡಿಕೊಂಡಿದ್ದ ಇಂಥ ಮಠಮಾನ್ಯಗಳು ಜೀರ್ಣಗೊಂಡಿರುವ ಕುರುಹುಗಳಿವೆಯಂತೆ. ಭಾಗಮಂಡಲ ಜಂಗಮ ಮಠಕ್ಕೆ ಸೇರಿದ ಹತ್ತಾರು ಎಕರೆ ಗದ್ದೆ ಬಯಲು ಮತ್ತು ಎಕರೆಗಟ್ಟಲೆ ಕಾಡು ತೋಪು ನಿರ್ವಹಣೆಯಿಲ್ಲದೆ ಪಾಳು ಬೀಳುವಂತಾಗಿದೆ. ಅಲ್ಲಿ ನೆಲೆಸಿರುವ ಏಕೈಕ ಕುಟುಂಬ ಕೂಡ ವಿಪರೀತ ಮಳೆಯಿಂದಾಗಿ ಕೃಷಿ ಕಾಯಕ ಕೈಗೂಡದೆ; ಅಸಹಾಯಕ ಪರಿಸ್ಥಿತಿಯಲ್ಲಿ ಬದುಕು ಸಾಗಿಸತೊಡಗಿದೆ.

ಮಠಮಾನ್ಯಗಳ ಮುಖ್ಯಸ್ಥರೊಂದಿಗೆ ಸಮುದಾಯ ಬಂಧುಗಳು ಕಾಳಜಿ ತೋರಿದರೆ, ಈ ಏಕೈಕ ಕುಟುಂಬ ದೊಂದಿಗೆ ಜಂಗಮ ಮಠಕ್ಕೂ ಕಾಯಕಲ್ಪ ನೀಡುವದು ಸಾಧ್ಯ.

? ಚಿ. ನಾ. ಸೋಮೇಶ್, ಮಡಿಕೇರಿ.