ಕುಶಾಲನಗರ, ಸೆ. 19: ಕೇಂದ್ರ ಸರಕಾರ ಕರ್ನಾಟಕದ ತೆರಿಗೆದಾರರ ಸಂಪೂರ್ಣ ತೆರಿಗೆ ಹಣವನ್ನು ಜಿ.ಎಸ್.ಟಿ ಹೆಸರಿನಲ್ಲಿ ಸಂಗ್ರಹಿಸಿ ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ. ಪಾಲಿನ ರೂ. 13.50 ಸಾವಿರ ಕೋಟಿ ಹಣವನ್ನು ನೀಡದೆ ಅನ್ಯಾಯ ಮಾಡಿದೆ ಎಂದು ಕೆ.ಪಿ.ಸಿ.ಸಿ ಸಂಯೋಜಕ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಪ್ರದೀಪ್‍ಕುಮಾರ್ ರೈ ಪಾಂಬಾರು ಆರೋಪಿಸಿದ್ದಾರೆ.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದಿಂದ 25 ಜನ ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸಲಾಗಿದೆ. ಜನತೆಗೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಚ್ಚೇ ದಿನ ಆಯೆಂಗೆ ಎಂಬ ನರೇಂದ್ರ ಮೋದಿ ಮಾತಿಗೆ ಮರುಳಾದ ಕರ್ನಾಟಕ ರಾಜ್ಯದ ಜನತೆ ಈಗ ತಮ್ಮ ತಪ್ಪಿಗೆ ಪರಿತಪಿಸುತ್ತಿದ್ದಾರೆ ಎಂದರು.

ಸರ್ಕಾರ ಸರಿಯಾಗಿ ನಡೆಸಲು ಆಗದೆ, ರಾಜ್ಯದ ಪಾಲಿನ ತೆರಿಗೆ ಹಣವನ್ನು ನೀಡಲೇಬೇಕು ಎಂದು ಒತ್ತಾಯಿಸಲು ಆಗದೆ ರಾಜ್ಯದ ಮುಖ್ಯಮಂತ್ರಿ ಬಿ.ಯಸ್. ಯಡಿಯೂರಪ್ಪ ಅಸಹಾಯಕರಾಗಿ ದ್ದಾರೆ. ರಾಜ್ಯದ ಜನತೆ ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಹಾಳು ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳನ್ನು ಕಿತ್ತೊಗೆಯಬೇಕಾಗಿದೆ ಎಂದು ಹೇಳಿದರು.

ಅಧಿಕಾರದ ದುರಾಸೆಯಿಂದ ರಾಜ್ಯದ ಜನತೆಯ ಪಾಲಿನ ತೆರಿಗೆ ಹಣವನ್ನು ಕೇಂದ್ರದಿಂದ ಪಡೆಯದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ. ರಾಜ್ಯ ಸರಕಾರದ ಆಡಳಿತವನ್ನು ಸರಿಯಾಗಿ ನಡೆಸಲು ಆಗದೆ ಇರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್ ಮಾತನಾಡಿ, ಪ್ರಕೃತಿ ವಿಕೋಪದಿಂದ ಕೊಡಗಿನ ಜನರು, ರೈತರು ಹಾಗೂ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೊಡಗಿಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದರು.

ಗೋಷ್ಠಿಯಲ್ಲಿ ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಇಬ್ರಾಹಿಂ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ರವಿ ಅಜ್ಜಳ್ಳಿ, ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷ ಜನಾರ್ಧನ್, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ ಇದ್ದರು.