ಕಣಿವೆ, ಸೆ. 19: ಗಿರಿಜನರು ಕುರಿ, ಕೋಳಿ, ಮೇಕೆ, ಹಾಗೂ ಹಸುಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸರ್ಕಾರ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು. ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಎರಡನೇ ಹಂತದಲ್ಲಿ ತಾಲೂಕಿನ ವಿವಿಧ ಗಿರಿಜನ ಹಾಡಿಗಳ ಫಲಾನುಭವಿಗಳಿಗೆ ಕುರಿಗಳನ್ನು ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಕೆಲವರು ಹಸು ಸಾಕಲು ಸಾಲ ಸೌಲಭ್ಯ ಪಡೆಯುವಾಗ ಪಕ್ಕದ ಮನೆಯ ಹಸು ತಂದು ತೋರಿಸಿ ಸಾಲ ಪಡೆದಿರುವ ನಿದರ್ಶನಗಳು ಇರುವುದರಿಂದ ಖುದ್ದಾಗಿ ನಾನೇ ಸ್ಥಳಕ್ಕೆ ಬಂದು ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಸರ್ಕಾರದ ಸೌಲಭ್ಯ ಒದಗಿಸುತ್ತಿರುವುದಾಗಿ ಶಾಸಕರು ಹೇಳಿದರು. ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಮಾತನಾಡಿ, ಸರ್ಕಾರದಿಂದ ಕಡುಬಡ ಗಿರಿಜನ ವಾಸಿಗಳು ಸದುಪಯೋಗ ಪಡಿಸಿಕೊಳ್ಳಲು ಕೋರಿದರು. ಕೊಡಗು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಮಂಜುಳಾ, ಮಾಜಿ ಸದಸ್ಯ ಬಿ.ಬಿ. ಭಾರತೀಶ್, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಗಿರಿಜನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎನ್. ಮನು, ಪ್ರಭಾಕರ್, ಬಿ.ಕೆ. ಮೋಹನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಾದಾಮಿ ಮೊದಲಾದವರಿದ್ದರು.