ಕೂಡಿಗೆ, ಸೆ. 19: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಲು ವಿವಿಧ ಪ್ರಾಣಿಗಳ ಚಿತ್ರದ ಜೊತೆಯಲ್ಲಿ ಆಕರ್ಷಕವಾದ ಕಲಾಕೃತಿಗಳನ್ನು ಕೆತ್ತನೆ ಮಾಡುವ ಮೂಲಕ ಬೃಂದಾವನದ ಅಭಿವೃದ್ಧಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅದರ ಮೂಲ ಪ್ರತಿ ತಯಾರು ಮಾಡಿದ್ದಾರೆ.

ಬೃಂದಾವನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಂಗೀತ ಕಾರಂಜಿ ನಿರ್ಮಿಸಲಾಗಿದೆ. ದೇಶದ ವಿವಿಧ ಪಾರ್ಕ್‍ಗಳ ಮಾದರಿಯಲ್ಲಿ ನೂತನ ಶೈಲಿಯಲ್ಲಿ ಹೂ ಮರಗಳ ಬೆಳೆಸುವಿಕೆ ಮತ್ತು ಅದರ ಆಕರ್ಷಕ ಕಟಿಂಗ್ ಮತ್ತು ಡೈನೋಸರ್ ಪ್ರಾಣಿಯ ಚಿತ್ರವನ್ನು ಅಳವಡಿಸುವುದರ ಜೊತೆಯಲ್ಲಿ ವಿವಿಧ ಪ್ರಾಣಿಗಳ ಚಿತ್ರವನ್ನು ಅಳವಡಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕೆತ್ತನೆ ಕೆಲಸ ಮಾಡಲು ಬೇಕಾಗುವ ವೆಚ್ಚದ ಕ್ರಿಯಾಯೋಜನೆ ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಬೇಕಾಗುವ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಮಳೆಗಾಲ ಕಳೆಯುತ್ತಾ ಬರುತ್ತಿರುವ ಹಿನ್ನೆಲೆ ಮತ್ತು ಕೊರೊನಾ ಲಾಕ್‍ಡೌನ್ ಸಡಿಲಿಕೆಯಿಂದ ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿರುವುದರಿಂದ ಅಣೆಕಟ್ಟೆ ಮುಂಭಾಗ ಸೇರಿದಂತೆ ಎಲ್ಲಾ ಕಡೆಗಳಿಗೆ ಬಣ್ಣ ಬಳಿಯುವುದರ ಮೂಲಕ ನೂತನ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ. -ಕೆ.ಕೆ.ಎನ್. ಶೆಟ್ಟಿ