ಭಾಗಮಂಡಲ, ಸೆ. 19: ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿ ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆ ನೀಡುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಭಾಗಮಂಡಲ ಹೋಬಳಿ ಘಟಕದ ವತಿಯಿಂದ ಕೆವಿಜಿ ಐಟಿಐ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2019-20ರ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಕ್ಕಾಗಿ ಕೆಲಸ ಮಾಡುವ ಮನಸ್ಸುಗಳು ಜಿಲ್ಲೆಯಲ್ಲಿ ಸಾಕಷ್ಟು ಇವೆ. ವಿದ್ಯಾರ್ಥಿಗಳು ಕನ್ನಡ ಭಾಷೆಯತ್ತ ಹೆಚ್ಚಿನ ಒಲವು ತೋರಬೇಕು. ಹಾಗಾದಾಗ ಕನ್ನಡ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಕೂಡಕಂಡಿ ದಯಾನಂದ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಬೇಕು. ಅದರೊಂದಿಗೆ ಉತ್ತಮ ಹುದ್ದೆಗಳನ್ನು ಅಲಂಕರಿಸಿ ಸರಳತೆ ಸಜ್ಜನಿಕೆಯಿಂದ ಜೀವನ ರೂಪಿಸಬೇಕು ಎಂದರು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜಾನಕಿ, ಟಿ.ಎಸ್. ನಾರಾಯಣಾಚಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಸಂಘ ಸಂಸ್ಥೆಗಳಿಗೆ ಆಚಾರ್ ಅವರ ಕೊಡುಗೆ ಅಪಾರ. ಅವರು ಶಾರೀರಿಕವಾಗಿ ನಮ್ಮ ನಾಡನ್ನು ಅಗಲಿದ್ದಾರೆ. ಆದರೆ ಅವರ ಸೇವೆ ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಭಾಗಮಂಡಲ ಹೋಬಳಿ ವ್ಯಾಪ್ತಿಯ 16 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ವಿ. ಪ್ರಕೃತಿ ಕನ್ನಡದಲ್ಲಿ ಪೂರ್ಣ ಅಂಕಗಳನ್ನು ಗಳಿಸಿದ್ದು ವಿಶೇಷವಾಗಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷ ಶ್ರೀಧರ್ ವಹಿಸಿದ್ದರು. ವಾಜಪೇಯಿ ವಸತಿ ಶಾಲೆಯ ಶಿಕ್ಷಕ ಮುತ್ತುರಾಜ್, ದೇವಂಗೋಡಿ ಹರ್ಷ, ನಿಡ್ಯಮಲೆ ಚಲನ್, ಕುದುಕುಳಿ ಇಂದಿರಾ ಭರತ್ ಉಪಸ್ಥಿತರಿದ್ದರು. ಕುದುಕುಳಿ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.