ಸೋಮವಾರಪೇಟೆ, ಸೆ. 19: ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾ. 21 ರಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 104 ಗ್ರಾಮ ಪಂಚಾಯತ್‍ಗಳಲ್ಲಿ 800ಕ್ಕೂ ಅಧಿಕ ಮಂದಿ ಕೆಲಸ ನಿರ್ವಹಿಸುತ್ತಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿಂದೆ ಹಲವಷ್ಟು ಬಾರಿ ಹೋರಾಟ ನಡೆಸಿದರೂ ನೌಕರರ ಬೇಡಿಕೆ ಈಡೇರಿಲ್ಲ. ಇದೀಗ ವಿಧಾನಸಭಾ ಅಧಿವೇಶನದ ಸಂದರ್ಭ ರಾಜ್ಯದ ಎಲ್ಲಾ ಜಿಲ್ಲೆಗಳ ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಲಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ ತಾ. 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಕೊಡಗಿನ 60ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ 3-6 ತಿಂಗಳಿನಿಂದ ಸಂಬಳವೇ ಆಗಿಲ್ಲ. ಕನಿಷ್ಟ ವೇತನವನ್ನೂ ಸರ್ಕಾರ ನೀಡುತ್ತಿಲ್ಲ. ಕಾರ್ಮಿಕರ ಪರ ಕೆಲಸ ಮಾಡುವ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಉಮೇಶ್, ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ಕಾರ್ಯದರ್ಶಿಗಳಾದ ಅಣ್ಣಪ್ಪ, ವಿಜಯ್, ನಿರ್ದೇಶಕ ಮಹಾಲಿಂಗ ಅವರುಗಳು ಉಪಸ್ಥಿತರಿದ್ದರು.