ಕೊಲೆ ಮೊಕದ್ದಮೆ
ಮಡಿಕೇರಿ, ಸೆ. 18 : ಕೆಲವು ದಿನಗಳ ಹಿಂದೆ ಕುಶಾಲನಗರ ಸಂತೆಮಾಳದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ಮಹಮ್ಮದ್ ರಫೀಕ್ ಹಾಗೂ ಚೆಲುವನ್ ಎಂಬವರ ನಡುವಿನ ಹೊಡೆದಾಟ ಪ್ರಕರಣದಲ್ಲಿ ಇದೀಗ ಗಾಯಾಳು ಮೃತಪಟ್ಟಿದ್ದು, ಕುಶಾಲನಗರ ಠಾಣೆಯ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಹತ್ತು ದಿನ ಹಿಂದೆ ಮಹಮ್ಮದ್ ರಫೀಕ್ (54) ಹಾಗೂ ಟಿ. ಚೆಲುವನ್ ನಡುವೆ ಹಣದ ವಿಚಾರವಾಗಿ ಪರಸ್ಪರ ಗಲಾಟೆ ನಡೆದಿತ್ತು. ಈ ವೇಳೆ ಮಹಮ್ಮದ್ ರಫೀಕ್ಗೆ ಚೆಲುವನ್ ತಕ್ಕಡಿಯಿಂದ ಹೊಡೆದು ಹಣೆಯ ಭಾಗಕ್ಕೆ ಗಂಭೀರ ಗಾಯಗೊಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಗಾಯಾಳುವಿಗೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆ ಬೆನ್ನಲ್ಲೇ ಪೊಲೀಸ್ ಆರೋಪಿ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.