ಕೊಡ್ಲಿಪೇಟೆ, ಸೆ.18: ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆ ಹೋಬಳಿಯ ಅನೇಕ ಗ್ರಾಮಗಳ ಜನತೆ ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದರೆ ಜನರ ದೂರಿಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆ ಅಸಹಾಯಕತೆ ವ್ಯಕ್ತಪಡಿಸುವ ಮೂಲಕ ಕೈಚೆಲ್ಲಿ ಕುಳಿತಿದೆ.ಬೆಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆರೇಕೇರಿ, ಚಿಕ್ಕಾಕುಂದ, ಅರೇಹಳ್ಳಿ, ಲಕನಿ, ಕೂಡ್ಲೂರು, ನೀರುಗುಂದ ಗ್ರಾಮಗಳ ಜಮೀನುಗಳಿಗೆ ನುಗ್ಗಿರುವ ಒಂದು ಮರಿಯಾನೆ ಸಹಿತ ಮೂರು ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಮಾಡಿವೆ.ಗುರುವಾರ ನಿವೃತ್ತ ಯೋಧ ಸಿ.ಬಿ.ಪ್ರಸನ್ನಕುಮಾರ್ ಅವರ ತೋಟದಲ್ಲಿದ್ದ ಆನೆಗಳು ಶುಕ್ರವಾರ ಬೆಳಿಗ್ಗೆ ಕೆರೇಕೇರಿ ಗ್ರಾಮದ ಪಟೇಲ್ ಕೆ.ಜಿ.ವೀರಪ್ಪ ಅವರಿಗೆ ಸೇರಿದ ಜಾಗದಲ್ಲಿ ಮೂರು ಆನೆಗಳು ಬಂದು ನಿಂತಿದ್ದು ಜನರು ಭೀತಿಯಿಂದ ಬದುಕುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ (ಮೊದಲ ಪುಟದಿಂದ) ನಾವೇನು ಮಾಡಲಾಗದು ಎಂದು ಕೈಚೆಲ್ಲಿ ಕುಳಿತಿದ್ದಾರೆ. ಕನಿಷ್ಟ ಕಾಡಾನೆಗಳನ್ನು ಅರಣ್ಯಪ್ರದೇಶ ದತ್ತ ಓಡಿಸಲೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಈ ಭಾಗದ ಜನರ ಆರೋಪವಾಗಿದೆ.
ಕಳೆದ ಕೆಲವು ದಿನಗಳಲ್ಲಿ ಅನೇಕ ಬಾರಿ ಈ ಪ್ರದೇಶಕ್ಕೆ ಕಾಡಾನೆಗಳು ಹೇಮಾವತಿ ಹಿನ್ನೀರಿನ ಭಾಗದಿಂದ ಬಂದು ಬೆಳೆಹಾನಿ ಮಾಡುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗ್ರಾಮಸ್ಥರು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಬೇಕಾದೀತು ಎಂದು ಈ ಮೂಲಕ ತಿಳಿಸಿದ್ದಾರೆ.