ಚೆಟ್ಟಳ್ಳಿ, ಸೆ. 18 : ದೇಶದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತವಿದ್ದು, ಎಲ್ಲ ಕಾರ್ಯಕರ್ತರ ಶ್ರಮದ ಫಲವಾಗಿ ಅಧಿಕಾರಗಳಿಸಲು ಸಾಧ್ಯವಾಗಿದೆ. ಒಗ್ಗಟ್ಟಿನ ಬಲದಿಂದ ಮಾತ್ರ ಪಕ್ಷ ಸಂಘಟನೆ ಬಲವರ್ಧನೆ ಸಾಧ್ಯವೆಂದು ಚೆಟ್ಟಳ್ಳಿ ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ಸ್ಥಾಪನೆಯ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಹೇಳಿದರು.

ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಕಾರ್ಯವನ್ನು ಮಾಡಿ ಹೆಸರುಗಳಿಸಬೇಕು. ಹಿಂದೂ ರಾಷ್ಟ್ರದಲ್ಲಿ ರಾಮಮಂದಿರ ನಿರ್ಮಾಣವಾಗಲು 28 ವರ್ಷಗಳೇ ಬೇಕಾಯಿತು. ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತ ನಡೆಸುವುದರಿಂದ ಪಕ್ಷದ, ದೇಶದ ಅಭಿವೃದ್ಧಿ ಸಾಧ್ಯವಾಗಿದೆ. ರೈತರಿಗೆ ಸಾಲಮನ್ನಾದಿಂದಿಡಿದು ಬ್ಯಾಂಕ್ ಖಾತೆಗೆ ಹಣದ ಜಮಾ ಮಾಡಿರುವುದು, ಹಿಂದುಳಿದ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಹಿರಿಯರ ಪಕ್ಷ ಸಂಘಟನೆಯ ಶ್ರಮದ ಫಲವಾಗಿ ಭಾರತೀಯ ಜನತಾಪಕ್ಷ ದೇಶದಲ್ಲಿ ಮೊದಲ ಪಕ್ಷ ಎಂದಾಗಿದೆ. ಹಲವು ವರ್ಷಗಳ ಕಾಂಗ್ರೆಸ್ ಆಡಳಿತದ ನಡುವೆ ಭಾರತೀಯ ಜನತಾ ಪಕ್ಷದ ಹೋರಾಟದ ಫಲವಾಗಿ ಇಂದು ದೇಶದ ಆಡಳಿತವನ್ನು ನಡೆಸುವಂತಾಗಿದೆ. ಸಂಘದ ಕಾರ್ಯಕರ್ತರ ಶ್ರಮದ ಫಲವಾಗಿ ಪಕ್ಷ ಮುಂದೆ ಸಾಗುತಿದ್ದು, ಸಂಘಟನೆ ಬಲಿಷ್ಠಗೊಳಿಸಲು ಯಾವುದೇ ಜಾತಿ ಧರ್ಮವನ್ನೆಲ್ಲ ಮರೆತು ಭಾರತೀಯ ನೆಲೆಗಟ್ಟಿನ ಪಕ್ಷವನ್ನು ಕಟ್ಟಬೇಕಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ಪಕ್ಷ ಬಲವರ್ಧನೆಗೆ ಹೋರಾಡದೇ ಪಕ್ಷ ಸಂಘಟಕರ ಶ್ರಮ ನಿರಂತರವಾಗಿರಬೇಕೆಂದು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ಅಧ್ಯಕ್ಷ ಭಾರತೀಶ್ ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ನಲವತ್ತು ವರ್ಷಗಳ ಹಿಂದೆ ಪಕ್ಷ ಸಂಘಟನೆಗಾಗಿ ದುಡಿದ ಶ್ರಮದ ಬಗ್ಗೆ ನೆನಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವರಾದ ನಾವುಗಳು ಈವರೆಗೂ ರಾಷ್ಟ್ರೀಯತೆಯ ದ್ಯೇಯವನ್ನೇ ಪಾಲಿಸುತಿದ್ದೇವೆ. ರೈತರು ಶ್ರಮವಹಿಸಿ ನೀಡಿದ ಹಣದಲ್ಲಿ ಚೆಟ್ಟಳ್ಳಿಯಲ್ಲಿ ಶ್ರೀ ನರೇಂದ್ರಮೋದಿ ಸಹಕಾರ ಭವನವ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ಇಂದು ಚೆಟ್ಟಳ್ಳಿಯಲ್ಲಿ ಭಾರತೀಯ ಜನತಾ ಪಕ್ಷ ಬಲಿಷ್ಠವಾಗಲು ಸಾಧ್ಯವಾಗಿದೆ. ವೈಯಕ್ತಿಕ ದ್ವೇಶ ಅಸೂಯೆಯನ್ನು ಬಿಟ್ಟು ಎಲ್ಲರೂ ಸಹಮತದಿಂದ ಪಕ್ಷ ಬಲಿಷ್ಠಗೊಳಿಸಬೇಕಿದೆ. ಮುಂದೆ ಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಸಂಪೂರ್ಣ ಚುಕ್ಕಾಣಿ ಹಿಡಿಯಬೇಕಿದೆ ಎಂದರು.

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ನವೆಂಬರ್ 14 ರಿಂದ 20 ರವರೆಗೆ ಪಕ್ಷ ಸೇವಾ ಕಾರ್ಯ ದಿವಸ ಆಚರಿಸಲಾಗುವುದು. ಡ್ರಗ್ ಮುಕ್ತ ಕರ್ನಾಟಕ, ವಿಶೇಷಚೇತನರಿಗೆ ಸಹಕಾರ, ರಕ್ತದಾನ ಶಿಬಿರ, ಪ್ಲಾಸ್ಮದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸ ಲಾಗುವುದೆಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದಪ್ಪ ಹೆಚ್.ಕೆ. ತಿಳಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ರಾಜ್ ಪಕ್ಷದ ಬಲವರ್ಧನೆಗೆ ಪಕ್ಷದ ಕೇಂದ್ರ ಸಂಘಟನೆಯ ಪ್ರಮುಖ ನಾಯಕರ ಮಾರ್ಗದರ್ಶದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಕ್ತಿ ಕೇಂದ್ರ ಸ್ಥಾಪನೆಯ ಬಗ್ಗೆ, ಪ್ರಮುಖ್, ಸಹಪ್ರಮುಖ್‍ಗಳ ಆಯ್ಕೆ, ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ವಿವರಿಸಿ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಿ ಪ್ರಮಾಣಪತ್ರ ನೀಡಲಾಯಿತು.

ಈ ಸಂದರ್ಭ ಚೆಟ್ಟಳ್ಳಿ ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ, ಪಕ್ಷದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳಾದ ಮನುಕುಮಾರ್ ರೈ, ಶರತ್ ಚಂದ್ರ, ಕುಮಾರಪ್ಪ, ಉಷಾ ತೇಜಸ್ವಿ, ರೂಪ ಸತೀಶ್, ದಾಸಂಡ ರಮೇಶ್, ಇಂದಿರಾ ರಮೇಶ್, ಅಶೋಕ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ, ತಾಲೂಕು ಘಟಕದ ಕಾರ್ಯದರ್ಶಿ ಮೇರಿ ಅಂಬುದಾಸ್, ಜಿಲ್ಲಾ ಹಾಗೂ ತಾಲೂಕು ಸಂಘಟಣಾ ಪದಾಧಿಕಾರಿಗಳು, ಚೆಟ್ಟಳ್ಳಿ ಭೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಪಕ್ಷದ ಪ್ರಮುಖ್ ಆಗಿ ಬಲ್ಲಾರಂಡ ಕಂಠಿಕಾರ್ಯಪ್ಪ, ಸಹಪ್ರಮುಖ್ ಆಗಿ ರವಿ ಎನ್.ಎಸ್, ತಾಲೂಕು ಯುವ ಮೋರ್ಚಾದ ಸದಸ್ಯ ಮುಳ್ಳಂಡ ಅಂಜನ್ ಮುತ್ತಪ್ಪ, ಮಹಿಳಾ ಮೋರ್ಚಾ ಮಾಲಾಶ್ರೀ, ಕೃಷಿ ಮೋರ್ಚಾ ಯುದುಕುಮಾರ್, ಎಸ್ಸಿ ಮೋರ್ಚಾ ಸುಗು, ಎಸ್‍ಟಿ ಮೋರ್ಚಾ ರವಿ, ಓಬಿಸಿ ಮೋರ್ಚಾ ಸುನಿತ, ಅಲ್ಪಸಂಖ್ಯಾತ ಮೋರ್ಚಾ ಪಿಲಿಫ್, ತಾಲೂಕು ಸಮಿತಿಗೆ ಮರದಾಳು ಹರಿ ಹಾಗೂ ದಯಾನಂದ ಅವರುಗಳನ್ನು ಆಯ್ಕೆ ಮಾಡಲಾಗಿದೆ.