ಸೋಮವಾರಪೇಟೆ, ಸೆ. 18: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದ್ದು, ಸೋನೆಯಂತೆ ಸುರಿಯುತ್ತಿರುವ ಮಳೆಯಿಂದಾಗಿ ಶೀತಮಯ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೃಷಿಕರು ಫಸಲು ನಷ್ಟ ಅನುಭವಿಸುತ್ತಿದ್ದಾರೆ.
ತಾಲೂಕಿನ ಶಾಂತಳ್ಳಿ ಹೋಬಳಿ ಯಾದ್ಯಂತ ಜಿಟಿಜಿಟಿ ಮಳೆಯಾ ಗುತ್ತಿದ್ದು, ಕಾಫಿ, ಕರಿಮೆಣಸು ಫಸಲು ನಷ್ಟವಾಗುತ್ತಿದ್ದರೆ, ಏಲಕ್ಕಿ ಬೆಳೆಗೆ ಕೊಳೆರೋಗ ಬಾಧಿಸಿದೆ.
ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಶೀತಮಯ ವಾತಾವರಣವಿದ್ದು, ಬಿಟ್ಟೂಬಿಡದೇ ಮಳೆಯಾಗುತ್ತಿದೆ. ಗರ್ವಾಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆ ಮಣ್ಣುಪಾಲಾಗುತ್ತಿವೆ. ಶಾಂತಳ್ಳಿ, ಬೆಟ್ಟದಳ್ಳಿ, ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿಯೊಂದಿಗೆ ಕರಿಮೆಣಸು ಫಸಲು ನೆಲಕ್ಕುರುಳುತ್ತಿದ್ದು, ಬೆಳೆಗಾರರು ನಷ್ಟ ಎದುರಿಸು ವಂತಾಗಿದೆ. ಇದರೊಂದಿಗೆ ಶುಂಠಿ ಕೃಷಿಗೆ ಕೊಳೆರೋಗ ಬಾಧಿಸಿ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೊಳೆರೋಗಕ್ಕೆ ತುತ್ತಾಗುತ್ತಿರುವ ಶುಂಠಿಯನ್ನೇ ಕಿತ್ತು ಮಾರಾಟ ಮಾಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಬಿಸಿಲಿನ ವಾತಾವರಣವಿದ್ದು, ದಿಢೀರಾಗಿ ಮಳೆಯಾಗು ತ್ತಿರುವದರಿಂದ ಕರಿಮೆಣಸು ಗೆರೆಗಳು ನೆಲಕ್ಕುರುಳುತ್ತಿವೆ. ಇದರೊಂದಿಗೆ ಕೊಳೆರೋಗಕ್ಕೆ ತುತ್ತಾದ ಕಾಫಿಯೂ ಮಣ್ಣುಪಾಲಾಗುತ್ತಿದೆ. ಬೆಳೆಗಾರರ ಬದುಕು ಸಂಕಷ್ಟದಲ್ಲಿದ್ದು, ಮತ್ತೆ ಮತ್ತೆ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಮಾಚಯ್ಯ ಅಭಿಪ್ರಾಯಿಸಿದ್ದಾರೆ. ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಕುಮಾರಳ್ಳಿ, ಕೊತ್ನಳ್ಳಿ, ಹೆಗ್ಗಡಮನೆ, ಕುಂದಳ್ಳಿ, ಮಲ್ಲಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಸುರಿಯುತ್ತಿರುವ ಮಳೆ ಭತ್ತ ಕೃಷಿಗೆ ವರದಾನವಾಗಿದ್ದರೆ, ಇತರ ಬೆಳೆಗಳ ಮೇಲೆ ಶಾಪವಾಗಿ ಪರಿಣಮಿಸಿದೆ.
ರಸ್ತೆಗಳ ದುಸ್ಥಿತಿ: ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಳೆನೀರು ಸಂಗ್ರಹವಾಗಿ, ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿದೆ.
ಸೋಮವಾರ ಪೇಟೆಯಿಂದ ಹಾನಗಲ್ಲು ಸಂಪರ್ಕ ರಸ್ತೆ, ಕರ್ಕಳ್ಳಿ-ಬೇಳೂರುಬಾಣೆ ರಸ್ತೆ, ಚೌಡ್ಲು-ಗಾಂಧಿನಗರ ರಸ್ತೆ, ಚೌಡ್ಲು ಸುಗ್ಗಿಕಟ್ಟೆ ರಸ್ತೆ, ಹಾನಗಲ್ಲು ಶೆಟ್ಟಳ್ಳಿ ರಸ್ತೆ, ಹರಗ, ಯಡೂರು ಊರೊಳಗಿನ ರಸ್ತೆ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ಹೇಳತೀರದ್ದಾಗಿದೆ. ಮಳೆಹಾನಿ ಪರಿಹಾರ ನಿಧಿಯಡಿ ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರೀ ಟೀಕರಣಗೊಳಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಗ್ರಾಮೀಣ ಭಾಗದ ರಸ್ತೆಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಹರಗ ಗ್ರಾಮದ ಶರಣ್ ಅಭಿಪ್ರಾಯಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 19.8 ಮಿ.ಮೀ., ಕೊಡ್ಲಿಪೇಟೆ 16, ಶನಿವಾರಸಂತೆ 8.6 ಮಿ.ಮೀ.,ಶಾಂತಳ್ಳಿ 33, ಸುಂಟಿಕೊಪ್ಪ 22.3, ಕುಶಾಲನಗರ 9.4 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
- ವಿಜಯ್