ಪ್ರಧಾನಿಯನ್ನು ಭೇಟಿಯಾದ ಸಿಎಂ ಬಿಎಸ್ವೈ
ಬೆಂಗಳೂರು, ಸೆ. 18: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಪಾರ್ಲಿಮೆಂಟ್ ಹೌಸ್ನಲ್ಲಿ 15 ನಿಮಿಷಗಳ ಭೇಟಿಯ ಅಂತ್ಯದಲ್ಲಿ ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆಯ ವರ್ಚುಯಲ್ ಉದ್ಘಾಟನೆಗೆ ಆಹ್ವಾನಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಯಡಿಯೂರಪ್ಪ ಭೇಟಿಯಾದರು. ಕೋವಿಡ್-19 ನಿರ್ಬಂಧದ ಹಿನ್ನೆಲೆ ಪ್ರಧಾನ ಮಂತ್ರಿಗಳ ಭೇಟಿ ವೇಳೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಮಾತ್ರ ಯಡಿಯೂರಪ್ಪ ಅವರ ಜೊತೆಯಲ್ಲಿದ್ದರು.
ತೆಂಗು ಸಂಸ್ಕರಣಾ ಘಟಕ ಲೋಕಾರ್ಪಣೆ
ಚಾಮರಾಜನಗರ, ಸೆ. 18: ಸಹಕಾರ ಸಂಘ ಸ್ಥಾಪಿಸಿರುವ ರಾಜ್ಯದ ಮೊದಲ ತೆಂಗು ಸಂಸ್ಕರಣಾ ಘಟಕ ಶುಕ್ರವಾರ ಚಾಮರಾಜನಗರ ತಾಲೂಕಿನ ಮುನಚನಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿಧ್ಯುಕ್ತವಾಗಿ ಅತ್ಯಾಧುನಿಕ ತೆಂಗು ಸಂಸ್ಕರಣಾ ಘಟಕ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು. ತೆಂಗು ಸಂಸ್ಕರಣಾ ಘಟಕವನ್ನು ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವು ಇದನ್ನು ಸ್ಥಾಪಿಸಿದ್ದು, ರಾಜ್ಯ ಸರ್ಕಾರವೂ ನೆರವು ನೀಡಿದೆ. 2018ರ ವರ್ಷಾರಂಭದಲ್ಲೇ ಉದ್ಘಾಟನೆಗೆ ಸಿದ್ಧವಾಗಿತ್ತು. ಪ್ರಾಯೋಗಿಕವಾಗಿ ಕಾರ್ಯವನ್ನೂ ನಿರ್ವಹಿಸಿದೆ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಬಾರದೇ ಇದ್ದುದರಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಕನಿಷ್ಟ 50 ಸಾವಿರ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ಪುಡಿ ಮಾಡುವ ಸಾಮಥ್ರ್ಯವನ್ನು ಈ ಅತ್ಯಾಧುನಿಕ ಘಟಕ ಹೊಂದಿದೆ.
ಮತಾಂತರದ ವಿರುದ್ಧ ಸುಗ್ರೀವಾಜ್ಞೆ
ಲಖನೌ, ಸೆ. 18: ಪ್ರೀತಿಯ ಹೆಸರಿನಲ್ಲಿ ಮತಾಂತರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಬಿದ್ದರೆ ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರಲು ಕಾರ್ಯತಂತ್ರ ರೂಪಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಮಹಿಳೆಯರನ್ನು ಮತಾಂತರಗೊಳಿಸಿ ನಂತರ ಕ್ರೂರವಾಗಿ ಹಿಂಸಿಸಲಾಗುತ್ತಿದೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ, ಸೂಕ್ತ ಕಾರ್ಯತಂತ್ರ ರೂಪಿಸುವಂತೆ ನಿರ್ದೇಶನ ನೀಡಿದ್ದಾರೆ. ಅಗತ್ಯವಿದ್ದರೆ, ಅದಕ್ಕಾಗಿ ಸುಗ್ರೀವಾಜ್ಞೆಯನ್ನು ಜಾರಿಗೆ ತರಬಹುದೆಂದು ಅವರು ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಕೋಸಿ ಮಹಾ ಸೇತುವೆ ಲೋಕಾರ್ಪಣೆ
ಪಾಟ್ನಾ, ಸೆ. 18: ಬಿಹಾರದ ಬಹು ನಿರೀಕ್ಷಿತ ಕೋಸಿ ರೈಲು ಮಹಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದು, ಇದರ ಜತೆಗೆ ಬಿಹಾರದಲ್ಲಿ ನೂತನ ರೈಲು ಮಾರ್ಗ ಯೋಜನೆ, ವಿದ್ಯುದ್ದೀಕರಣ ಯೋಜನೆಗಳಿಗೂ ಪ್ರಧಾನಿ ಶುಕ್ರವಾರ ಚಾಲನೆ ನೀಡಿದರು. ಈ ಸೇತುವೆಯು 1.0 ಕಿ.ಮೀ. ಉದ್ದವಿದ್ದು 516 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2003-04ರಲ್ಲಿ ಈ ಸೇತುವೆ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿತ್ತು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈ ಯೋಜನೆಗಳು ಬಿಹಾರದಲ್ಲಿನ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಜತೆಗೆ ಪಶ್ಚಿಮ ಬಂಗಾಳ ಮತ್ತು ಪಶ್ಚಿಮ ಭಾರತಕ್ಕೆ ಸಂಪರ್ಕವೇರ್ಪಡುವಂತೆ ಮಾಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ 2004ರಲ್ಲಿ ಕೋಸಿ ರೈಲು ಮಹಾ ಸೇತುವೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. 2004ರ ನಂತರದ ಸರ್ಕಾರ ಮಾಡಿದ ರೀತಿಯಲ್ಲಿಯೇ ಈ ಕೆಲಸ ಮಾಡಿದ್ದರೆ ಈ ಯೋಜನೆ ನಿಗದಿತ ಕಾಲದಲ್ಲಿ ಪೂರ್ಣಗೊಳ್ಳುತ್ತಿರಲಿಲ್ಲ ಎಂದರು.
ಸಿಸಿಬಿಯಿಂದ ಮತ್ತೆ ಮೂವರಿಗೆ ನೋಟೀಸ್
ಬೆಂಗಳೂರು, ಸೆ. 18: ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಮತ್ತೆ ಮೂವರಿಗೆ ನೋಟೀಸ್ ನೀಡಿದೆ. ಕಾಟನ್ಪೇಟೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸ್ಯಾಂಡಲ್ವುಡ್ನ ಮೂವರಿಗೆ ನೋಟೀಸ್ ನೀಡಿದೆ. ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ಪುತ್ರ ಯುವರಾಜ್, ಬಿಗ್ಬಾಸ್ ಸ್ಪರ್ಧಿಯಾಗಿದ್ದ ಸಂತೋಷ್ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿ ಅವರಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟೀಸ್ ರವಾನಿಸಿದ್ದಾರೆ. ಮೂವರೂ ನಾಳೆ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ನಲ್ಲಿ ತಿಳಿಸಿದೆ. ಈ ಬಗ್ಗೆ ಮಾಧ್ಯಮ ಗಳೊಂದಿಗೆ ಮಾತನಾಡಿರುವ ಅಕುಲ್ ಬಾಲಾಜಿ ನಾನು ಹೈದರಾಬಾದ್ ನಲ್ಲಿದ್ದೇನೆ. ನನಗೆ ಸಿಸಿಬಿ ನೋಟೀಸ್ ಸಿಕ್ಕಿದೆ. ನಾಳೆ ವಿಚಾರಣೆಗೆ ಕರೆಯಲಾಗಿದ್ದು ಫ್ಲೈಟ್ ಅಥವಾ ಡ್ರೈವ್ ಮೂಲಕ ಬೆಂಗಳೂರಿಗೆ ತಲುಪಿ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.
ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಗೆ ಶ್ರದ್ಧಾಂಜಲಿ
ಬೆಂಗಳೂರು, ಸೆ. 18: ಕೋವಿಡ್ ಸೋಂಕಿಗೆ ತುತ್ತಾಗಿ ಅನಾರೋಗ್ಯದಿಂದ ನಿಧನರಾದ ರಾಜ್ಯಸಭಾ ಸಂಸದ ಅಶೋಕ್ ಗಸ್ತಿ ಅವರಿಗೆ ರಾಜ್ಯಸಭೆಯಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಕರ್ನಾಟಕದಿಂದ ಈ ಸದನಕ್ಕೆ ಆಯ್ಕೆಯಾಗಿದ್ದ ಸದಸ್ಯ ಅಶೋಕ್ ಗಸ್ತಿ ಅವರ ನಿಧನಕ್ಕೆ ತೀವ್ರ ದುಃಖವನ್ನು ಸೂಚಿಸುತ್ತೇನೆ. ಸಮರ್ಥ ಸಂಸದರನ್ನು ದೇಶ ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸಿದರು. ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅವರು ಕೆಲವು ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ನ್ಯುಮೋನಿಯಾ ಕೂಡಾ ಆಗಿತ್ತು.