ಮಡಿಕೇರಿ, ಸೆ. 18: ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳನ್ನು ಇದೇ ತಾ. 21 ರಿಂದ 30ರ ತನಕ ಪ್ರವೇಶ ಕಲ್ಪಿಸಲು ಶಾಲೆಗಳು ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಚಟುವಟಿಕೆ ಅಥವಾ ತರಗತಿಗಳು ಆರಂಭಗೊಳ್ಳುವದಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ವಿವರ ನೀಡಿದ ಸಚಿವರು, ಮೇಲ್ಕಾಣಿಸಿದ ದಿನಗಳಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶಾತಿಯೊಂದಿಗೆ ಪ್ರಥಮ ಹಂತದ ಪಠ್ಯಕ್ರಮ ಚಟುವಟಿಕೆಗೆ ಸೀಮಿತವಾಗಿ ಆಡಳಿತ ಮಂಡಳಿಯು ಕನಿಷ್ಟ ಶುಲ್ಕ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶಾಲೆಗಳ ಆಡಳಿತ ಮಂಡಳಿ, ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಗೊಂದಲವಿದ್ದರೆ, ನೇರವಾಗಿ ಶಾಲಾ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಸಚಿವರು ಸಲಹೆ ಮಾಡಿದ್ದಾರೆ. ಡಿಡಿಪಿಐ ವಿವರಣೆ ಈಗಾಗಲೇ ಕೊಡಗಿನ ಎಲ್ಲಾ ಸರಕಾರಿ ಶಾಲೆಗಳಲ್ಲಿ ತಾ. 21 ರಿಂದ ಎಲ್ಲಾ ಪಠ್ಯಕ್ರಮಗಳ ಶಿಕ್ಷಕರು ಹಾಜರಿರುತ್ತಾರೆ. (ಮೊದಲ ಪುಟದಿಂದ) ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಲಿಖಿತ ಒಪ್ಪಿಗೆ ಪತ್ರದೊಂದಿಗೆ ಹಾಜರಾಗಿ, ಆಯಾ ಪಠ್ಯ ವಿಷಯಗಳ ಶಿಕ್ಷಕರನ್ನು ಭೇಟಿಯಾಗಿ ತಮ್ಮ ಸಂಶಯ ನಿವಾರಣೆಯೊಂದಿಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ತಾ. 21 ರಿಂದ 28ರ ಅವಧಿಯಲ್ಲಿ ಕೊಡಗಿನ ಐದು ಪರೀಕ್ಷಾ ಕೇಂದ್ರಗಳಾದ ಮಡಿಕೇರಿ ಸರಕಾರಿ ಪ.ಪೂ. ಕಾಲೇಜು, ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಪ.ಪೂ. ಕಾಲೇಜು ಹಾಗೂ ಸಂತ ಮೈಕಲರ ಪ್ರೌಢಶಾಲೆ ಮಡಿಕೇರಿಯಲ್ಲಿ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಡಗು ವಿದ್ಯಾಲಯ : ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಸೇರಿದಂತೆ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆ, ಸಂತ ಮೈಕಲರ ಶಾಲೆ, ಸಂತಜೋಸೆಫರ ಶಾಲೆ, ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಕ್ರೆಸೆಂಟ್ ಶಾಲೆಗಳಲ್ಲಿ ಸರಕಾರದ ಮಾರ್ಗಸೂಚಿಯಂತೆ ಶೈಕ್ಷಣಿಕ ಚಟುವಟಿಕೆಗೆ ತಯಾರಿ ನಡೆಸಲಾಗುವದು ಎಂದು ಸಂಬಂಧಿಸಿದ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಕೊಡಗು ವಿದ್ಯಾಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್ ‘ಶಕ್ತಿ’ಯೊಂದಿಗೆ ಮಾಹಿತಿ ನೀಡುತ್ತಾ, ಬೆಳಿಗ್ಗೆ 9.30 ರಿಂದ 12.30ರ ತನಕ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕೆಗಾಗಿ ಆಯಾ ವಿಷಯ ಶಿಕ್ಷಕರು ಮಕ್ಕಳಿಗೆ ಪಠ್ಯಕ್ರಮ ಬೋಧಿಸಲಿದ್ದಾರೆ ಎಂದು ವಿವರಿಸಿದ್ದಾರೆ. ಅಲ್ಲದೆ ಮಧ್ಯಾಹ್ನ 1 ಗಂಟೆ ಬಳಿಕ 4 ಗಂಟೆಯ ಅವಧಿಯೊಳಗೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಛತೆ ಕಡೆಗೆ ನಿಗಾವಿರಿಸಿ, ಕೊರೊನಾ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲಾಖೆಯ ಅಧಿಕೃತ ಆದೇಶದ ನಿರೀಕ್ಷೆಯಲ್ಲಿ ಶಿಕ್ಷಕರು

ಸೋಮವಾರಪೇಟೆ: ಕೊರೊನಾ ವೈರಸ್ ಹರಡುವ ಆತಂಕದ ಹಿನ್ನೆಲೆ ಕಳೆದ ಮಾರ್ಚ್ ಅಂತ್ಯದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇದೀಗ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜುಗೊಳ್ಳುತ್ತಿವೆ.

ಕೊರೊನಾ ವೈರಾಣುವಿನ ಆತಂಕದಲ್ಲೇ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರೆ, ಉಳಿದ ತರಗತಿಗಳ ವಿದ್ಯಾರ್ಥಿಗಳು ನೇರವಾಗಿ ಮುಂದಿನ ತರಗತಿಗಳಿಗೆ ಬಡ್ತಿ ಹೊಂದಿದ್ದಾರೆ.

ಆದರೂ ಸಹ ತರಗತಿಗಳಿಗೆ ತೆರಳಲು ಅವಕಾಶ ಇಲ್ಲದ್ದರಿಂದ ಮನೆಯಲ್ಲಿಯೇ ಉಳಿದಿದ್ದು, ಶಿಕ್ಷಕರುಗಳೇ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಮಾಡುವ ವ್ಯವಸ್ಥೆಗೆ ಒಗ್ಗಿದ್ದಾರೆ. ವಿದ್ಯಾಗಮದ ಹೆಸರಿನಲ್ಲಿ ನಡೆಯುವ ತರಗತಿಗಳು ಅಷ್ಟೇನೂ ಪರಿಣಾಮ ಬೀರದಿದ್ದರೂ ಸಹ ಶೈಕ್ಷಣಿಕ ಸಂಪರ್ಕ ಕಳಚಬಾರದೆಂಬ ನಿಟ್ಟಿನಲ್ಲಿ ಸರ್ಕಾರ ‘ವಿದ್ಯಾಗಮ’ ಜಾರಿಗೆ ತಂದಿದೆ.

ವಿದ್ಯಾಗಮ ಯೋಜನೆಯಡಿ ಶಿಕ್ಷಕರು ಗ್ರಾಮಗಳಿಗೆ ತೆರಳಿ ಲಭ್ಯವಿರುವ ಸ್ಥಳದಲ್ಲಿ ಪಾಠ ಪ್ರವಚನ ಮಾಡುತ್ತಿದ್ದರೂ, ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. ಹಲವಷ್ಟು ಮಕ್ಕಳು ವಿದ್ಯಾಗಮದಿಂದ ದೂರವೇ ಉಳಿದಿದ್ದು, ಶಿಕ್ಷಕರಿಗೆ ತಲೆನೋವು ತರಿಸಿದೆ. ಈ ನಡುವೆ ಆನ್‍ಲೈನ್ ತರಗತಿ, ವಾಟ್ಸಾಪ್ ತರಗತಿಗಳು ನಡೆದರೂ ಬಹುತೇಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ.

ಗ್ರಾಮೀಣ ಭಾಗದಲ್ಲಿ ವಿದ್ಯುತ್, ನೆಟ್‍ವರ್ಕ್, ಮೊಬೈಲ್‍ಗಳ ಸಮಸ್ಯೆಯಿಂದ ಆನ್‍ಲೈನ್ ತರಗತಿಗಳು ಯಶಸ್ವಿಯಾಗಿಲ್ಲ. ಇದೀಗ ತಾ. 21ರಿಂದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಿ ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನ ಪಡೆಯಲು ಶಿಕ್ಷಣ ಇಲಾಖೆ ಸಮ್ಮತಿ ಸೂಚಿಸಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜುಗೊಳ್ಳುತ್ತಿವೆ.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿರುವ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ, ಓಎಲ್‍ವಿ ಆಂಗ್ಲ ಮಾಧ್ಯಮ ಶಾಲೆ, ಸಾಂದೀಪನಿ ಪ್ರೌಢಶಾಲೆ, ಜ್ಞಾನವಿಕಾಸ, ದೊರೆ ವೀರರಾಜೇಂದ್ರ ಪ್ರೌಢಶಾಲೆ, ಸಂತ ಜೋಸೆಫರ ಶಾಲೆ ಸೇರಿದಂತೆ ಗ್ರಾಮೀಣ ಪ್ರದೇಶದ ಶಾಲೆಗಳು ವಿದ್ಯಾರ್ಥಿಗಳ ಆಗಮನಕ್ಕೆ ಸಿದ್ಧಗೊಳ್ಳುತ್ತಿವೆ.

ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕೆಲವಾರು ವಿದ್ಯಾರ್ಥಿಗಳು ಈ ಹಿಂದಿನಿಂದಲೂ ಶಾಲೆಗೆ ಹಾಜರಾಗಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದರಂತೆಯೇ ಬಹುತೇಕ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಿ ಶಿಕ್ಷಕರಿಂದ ಪಾಠಕ್ಕೆ ಸಂಬಂಧಿಸಿದ ನೋಟ್ಸ್‍ಗಳನ್ನು ಸಂಗ್ರಹಿಸುತ್ತಿದ್ದಾರೆ.

ಇದೀಗ ಶಿಕ್ಷಣ ಇಲಾಖೆಯೇ ವಿದ್ಯಾರ್ಥಿಗಳ ಆಗಮನಕ್ಕೆ ಹಸಿರು ನಿಶಾನೆ ತೋರುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವರ್ಗದಲ್ಲಿ ಹಲವಷ್ಟು ಚಟುವಟಿಕೆಗಳು ಕಂಡುಬರುತ್ತಿವೆ. ತಾ. 21ರಿಂದ ಎಂದಿನಂತೆ ತರಗತಿಗಳು ಪ್ರಾರಂಭವಾಗಲಿವೆಯೇ? ಎಂದು ಹಲವಷ್ಟು ವಿದ್ಯಾರ್ಥಿಗಳು, ತಮ್ಮ ಶಿಕ್ಷಕರನ್ನು ಕೇಳುತ್ತಿದ್ದಾರೆ.

ತಾ. 21ರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿದ್ದರೂ, ಅಧಿಕೃತ ಆದೇಶ ಮಾತ್ರ ಶಾಲೆಗಳಿಗೆ ತಲುಪಿಲ್ಲ. ಮಾಧ್ಯಮದ ವರದಿಗಳ ಆಧಾರದ ಮೇರೆ ಶಾಲೆಗಳ ಕೊಠಡಿ, ಆವರಣ ಶುಚಿತ್ವ ಕಾರ್ಯ ನಡೆಯುತ್ತಿದೆ.

ತಾ. 21ರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯಲ್ಲಿ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಇಲಾಖೆಯಿಂದ ಈವರೆಗೆ ಯಾವದೇ ಸೂಚನೆ, ಆದೇಶ ಬಂದಿಲ್ಲ. ಆದರೂ ಸಹ ಶಾಲಾ ಕೊಠಡಿಗಳ ಸ್ವಚ್ಛತೆ, ಟೇಬಲ್, ಬೆಂಚ್‍ಗಳ ಶುಚಿತ್ವ ಕಾರ್ಯ ಕೈಗೊಳ್ಳಲಾಗಿದೆ. ಖಾಸಗಿ ಶಾಲೆಗಳಲ್ಲಿ ತರಗತಿಗಳಿಗೆ ಒಂದರಂತೆ ಸ್ಯಾನಿಟೈಸರ್ ಸ್ಟ್ಯಾಂಡ್, ಥರ್ಮಲ್ ಸ್ಕ್ಯಾನರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ಡೆಸ್ಕ್‍ನಲ್ಲಿ ಓರ್ವ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದ್ದು, ಒಂದು ತರಗತಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುವ ಚಿಂತನೆ ನಡೆದಿದೆ.

ಒಟ್ಟಾರೆ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಯಾವದೇ ಆದೇಶ/ಮಾರ್ಗದರ್ಶನ ಬಾರದೇ ಇದ್ದರೂ, ಶಾಲೆಗಳನ್ನು ತೆರೆಯಲು ಪೂರ್ವಭಾವಿ ಸಿದ್ಧತೆಗಳನ್ನು ಆಡಳಿತ ಮಂಡಳಿ, ಶಿಕ್ಷಕ ವರ್ಗ ಕೈಗೊಳ್ಳುತ್ತಿರುವದು ಕಂಡುಬರುತ್ತಿದೆ.

ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ವಿದ್ಯಾರ್ಥಿಗಳು ಬಂದರೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಾಠ ಮಾಡುವ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಶೈಕ್ಷಣಿಕವಾಗಿ ಮಾರ್ಗದರ್ಶನ ನೀಡಲು ಶಿಕ್ಷಕ ವರ್ಗ ಸಿದ್ಧವಿದೆ. ಎಲ್ಲಾ ಶಿಕ್ಷಕರು ಕರ್ತವ್ಯದಲ್ಲಿದ್ದು, ವಿದ್ಯಾಗಮ ಯೋಜನೆಯಡಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಸ್ಯಾನಿಟೈಸರ್ ಮಾಡಿದ ನಂತರ ತರಗತಿಗೆ ಪ್ರವೇಶ ಕಲ್ಪಿಸಲಾಗುವದು. ಪ್ರತಿದಿನ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಚೌಡ್ಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಇಲಾಖೆಯಿಂದ ಈವರೆಗೆ ಯಾವದೇ ಅಧಿಕೃತ ಆದೇಶ ಬಂದಿಲ್ಲ. ಆದೇಶ ಬಂದ ನಂತರ, ಅದರಂತೆ ಮುಂದುವರೆಯಲಾಗುವದು ಎಂದು ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ತಳವಾರ್ ತಿಳಿಸಿದ್ದಾರೆ.

ಶಾಲಾ ಆವರಣ ಮತ್ತು ಕೊಠಡಿಗಳನ್ನು ಶುಚಿಗೊಳಿಸಲಾಗುತ್ತಿದೆ. ಕೊಠಡಿ ಹಾಗೂ ಮೇಜುಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲಾ ಶಿಕ್ಷಕರು, ಸಿಬ್ಬಂದಿಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳನ್ನು ಪ್ರತಿದಿನ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಒಟ್ಟಾರೆ ಶಿಕ್ಷಣ ಇಲಾಖೆಯ ಅಧಿಕೃತ ಆದೇಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಜ್ಞಾನವಿಕಾಸ ಶಾಲೆಯ ಮುಖ್ಯಶಿಕ್ಷಕಿ ಪಿ.ಕೆ. ಲಕ್ಷ್ಮೀ ತಿಳಿಸಿದ್ದಾರೆ.

ಕುಶಾಲನಗರ: ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಯಾವುದೇ ರೀತಿಯ ಸರಕಾರಿ ಆದೇಶಗಳು ಬಂದಿರುವುದಿಲ್ಲ ಎಂದು ಶಾಲೆಗಳ ಮುಖ್ಯಸ್ಥರುಗಳು ತಿಳಿಸಿದ್ದಾರೆ. ಈ ತಿಂಗಳ 21 ರಿಂದ ಈ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕುಶಾಲನಗರ ಸರಕಾರಿ ಪ್ರೌಢಶಾಲೆ ಮುಖ್ಯಸ್ಥರುಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಪ್ರಸಕ್ತ ಸರಕಾರದ ಸುತ್ತೋಲೆಯಂತೆ ವಿದ್ಯಾಗಮ ತರಗತಿಗಳು ನಡೆಯುತ್ತಿವೆ. ಈ ತಿಂಗಳ 21 ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ಬಂದ್ ಆಗಿರುವ ಶೈಕ್ಷಣಿಕ ಕೇಂದ್ರಗಳಲ್ಲಿ ಮುಖ್ಯೋಪಾಧ್ಯಾಯರುಗಳು, ಪ್ರಾಂಶುಪಾಲರು, ಶಿಕ್ಷಕರುಗಳು ಮತ್ತು ಶಿಕ್ಷಕೇತರ ವರ್ಗ ಹಾಜರಾಗುತ್ತಿದ್ದು ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು 5 ಕೇಂದ್ರಗಳಲ್ಲಿ ವಿದ್ಯಾಗಮ ತರಗತಿಗಳನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಕೊಪ್ಪ, ಕುಶಾಲನಗರ ಸೇರಿದಂತೆ ಒಟ್ಟು 5 ಕೇಂದ್ರಗಳಲ್ಲಿ ಶಿಕ್ಷಕರು ಪಾಠ ಪ್ರವಚನ ಮತ್ತು ಮಾಹಿತಿ ಒದಗಿಸುತ್ತಿದ್ದಾರೆ. ಸರಕಾರಿ ಆದೇಶ ಹೊರಬಿದ್ದ ಬೆನ್ನಲ್ಲೇ ತರಗತಿಗಳು ಆರಂಭವಾಗುವ ನಿಟ್ಟಿನಲ್ಲಿ ಎಲ್ಲಾ ಪೂರ್ವಸಿದ್ದತೆಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ತಿಂಗಳ 21 ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದ್ದು 28 ರ ತನಕ ಪರೀಕ್ಷೆ ನಡೆಯಲಿದೆ. ಅಂದಾಜು 200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕಾಲೇಜು ಉಪ ಪ್ರಾಂಶುಪಾಲರಾದ ಬಿ.ಬಿ.ಸಾವಿತ್ರಿ ತಿಳಿಸಿದ್ದಾರೆ.

ಇಲಾಖೆಯ ಮಾರ್ಗಸೂಚಿ ಬಂದಿಲ್ಲ

ಗೋಣಿಕೊಪ್ಪಲು: ಕಳೆದ ಆರು ತಿಂಗಳಿನಿಂದ ಅಂತರ್‍ಜಾಲದ ಮೂಲಕ ಮನೆ ಪಾಠಕ್ಕೆ ಸೀಮಿತಗೊಂಡಿರುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬೆಳಗಿ ಆನ್‍ಲೈನ್ ತರಗತಿಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿ ಪಡೆದರು. ಗೋಣಿಕೊಪ್ಪಲುವಿನ ಕಾಫ್ಸ್ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಇವರು ಶಿಕ್ಷಕರಿಂದ ಸಮಗ್ರ ಮಾಹಿತಿ ಪಡೆದರು. ತರಗತಿಗಳನ್ನು ಆರಂಭಿಸಲು ಸರ್ಕಾರದ ಯಾವುದೆ ಮಾರ್ಗಸೂಚಿಗಳು ಇಲ್ಲಿಯ ತನಕ ಬಂದಿರುವುದಿಲ್ಲ ಇಲಾಖೆಯ ಮಾರ್ಗಸೂಚಿಗಳನ್ನು ಎದುರು ನೋಡುತ್ತಿದ್ದೇವೆ. ಶಾಲೆಯ ಆವರಣಕ್ಕೆ ವಿದ್ಯಾರ್ಥಿಗಳು ಆಗಮಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಯಾವುದೇ ತರಗತಿಗಳು ಆರಂಭವಾಗುವುದಿಲ್ಲವೆಂದು ‘ಶಕಿ’್ತಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ವೀರಾಜಪೇಟೆ : ವೀರಾಜಪೇಟೆಯ ಸಂತಅನ್ನಮ್ಮಕಾಲೇಜು ಪ್ರಸಕ್ತ ಸಾಲಿನ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ಶಿಕ್ಷಣ ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಾ:21ರಿಂದ ಆನ್‍ಲೈನ್ ಶಿಕ್ಷಣದಲ್ಲಿ ಏನಾದರೂ ಸಂಶಯ, ಸಮಸ್ಯೆಕಂಡು ಬಂದರೆ ಪರಿಹರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಬ್ಯಾಚ್, ಬ್ಯಾಚ್‍ಗೆ ಮಾರ್ಗದರ್ಶನದ ಅವಕಾಶ ಮಾಡಿಕೊಡಲಾಗಿದೆಎಂದು ಸಂತಅನ್ನಮ್ಮ ವಿದ್ಯಾಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ತಿಳಿಸಿದ್ದಾರೆ.

ಈಗಾಗಲೇ ಪಿಯುಸಿ ವಿದ್ಯಾರ್ಥಿಗಳಿಗಾಗಿ 25 ರಿಂದ 30 ವಿದ್ಯಾರ್ಥಿಗಳಿಗೆ ಒಂದೊಂದು ಬ್ಯಾಚ್ ಮಾಡಿದ್ದು, ಅದರಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬ್ಯಾಚ್‍ಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು ಸಂಪರ್ಕಿಸುವ ಸಮಯವನ್ನು ನಿಗದಿ ಪಡಿಸಿ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪ್ರಾಧ್ಯಾಪಕರೊಂದಿಗೆ ಮುಕ್ತವಾಗಿ ಚರ್ಚಿಸಲು ಅವಕಾಶವಿದೆ.

ತಾ. 21ರಿಂದ ಪಿಯುಸಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯ್ದ ಬ್ಯಾಚ್‍ಗಳ ಸಮಸ್ಯೆಗಳು, ಪರಿಹಾರ, ಮಾರ್ಗದರ್ಶನ ಮುಂದುವರೆಯಲಿದೆ. ಕಾಲೇಜಿನ ನಿಗದಿತ ಸಭಾಂಗಣಕ್ಕೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನ್, ಸ್ಯಾನಿಟೈಸರ್‍ನಿಂದ ಕೈ ಶುಚಿಗೊಳಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆ ಕೊರೊನಾ ವೈರಸ್‍ನ ರಕ್ಷಣೆಯೊಂದಿಗೆ ಕಾಲೇಜಿಗೆ ಬರಬೇಕು. ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ಇನ್ನೂ ಯಾವುದೇ ಆದೇಶ ಬಂದಿಲ್ಲ ಎಂದು ರೆ.ಫಾ. ಮದಲೈ ಮುತ್ತು ತಿಳಿಸಿದರು.

ಎಸ್.ಎಸ್.ಎಲ್.ಸಿ ತರಗತಿಗಳನ್ನು ಆರಂಭಿಸಲು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪೋಷಕರು ಹಾಗೂ ಶಿಕ್ಷಕ ವೃಂದದೊಂದಿಗೆ ವಿಚಾರ ವಿನಿಮಯ ಮಾಡಿ ತರಗತಿ ಮುಂದುವರೆಸುವ ಕುರಿತು ಸಹಮತದೊಂದಿಗೆ ತೀರ್ಮಾನಕ್ಕೆ ಬರಲಾಗುವುದು. ಒಂದೆರಡು ದಿನಗಳಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.