ಮಡಿಕೇರಿ ಸೆ.18 : ಜಿಲ್ಲೆಯ ವಸತಿ ರಹಿತ ಕಡು ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ವಸತಿ ಯೋಜನೆಯ ಮೂಲಕ ಮನೆಗಳನ್ನು ನೀಡಬೇಕು, ನಿವೇಶನದ ಹಕ್ಕುಪತ್ರ ಹಂಚಿಕೆ ಮಾಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ವೇದಿಕೆಯ ಪ್ರಮುಖರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಅಧ್ಯಕ್ಷ ಹೆಚ್.ಕೆ. ಮುತ್ತಪ್ಪ, ಕಾರ್ಯದರ್ಶಿ ಜಯಂತಿ, ಬೋಜಪ್ಪ, ಗಣೇಶ್, ಮಡಿಕೇರಿ ತಾಲೂಕು ಅಧ್ಯಕ್ಷೆ ಶಾರದ, ವೀರಾಜಪೇಟೆ ತಾಲೂಕು ಅಧ್ಯಕ್ಷ ದೇವಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಶೋಭ, ಕಾರ್ಯದರ್ಶಿ ಪುಟ್ಟಸ್ವಾಮಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.