ಮಡಿಕೇರಿ, ಸೆ.18: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಅರ್ಚಕ ಸಮುದಾಯದವರ ಪೂಜಾ ವಿಧಿ ವಿಧಾನಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿಂದು ಒಕ್ಕೂಟದ ಯುವ ಘಟಕದೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಧ್ಯಕ್ಷ ಸೋಮಣ್ಣ ಅವರು, ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದವರು ಮೃತರಾದ ನೋವು ಹಸಿಯಾಗಿರುವಾಗಲೇ ತಲಕಾವೇರಿಯ ಇತಿಹಾಸವನ್ನು ಮರುಸೃಷ್ಟಿ ಮಾಡಲು ಹೊರಟಿರುವ ಕೆಲವರ ಕ್ರಮವನ್ನು ಸಭೆಯಲ್ಲಿ ಖಂಡಿಸಲಾಯಿತು. ಕ್ಷೇತ್ರದಲ್ಲಿ ಪೂಜಾ ಕೈಂಕರ್ಯಗಳನ್ನು ವೈದಿಕ ಶಿಕ್ಷಣ ಪರಿಣಿತ ಪುರೋಹಿತ ಕುಟುಂಬಗಳೇ ನಡೆಸಬೇಕೆಂಬ ತಿಳುವಳಿಕೆ ಇದ್ದರೂ ಕೆಲವರು ಅಸಾಧ್ಯತೆಯತ್ತ ಹೆಜ್ಜೆಯಿಡುತ್ತಿರುವುದು ಹಾಸ್ಯಾಸ್ಪದ. ಇದನ್ನು ಬೆಂಬಲಿಸಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ; ಇದು ಶಾಂತವಾಗಿರುವ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಶತಮಾನಗಳಿಂದ ತಲಕಾವೇರಿ ಹಾಗೂ ಭಗಂಡೇಶ್ವರ ದೇವಸ್ಥಾನಗಳಲ್ಲಿ ಕೋಡಿ ಹಾಗೂ ಬಳ್ಳಡ್ಕ ಕುಟುಂಬ ತಕ್ಕತನವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದೆ. ಅಷ್ಟಮಂಗಲ ಪ್ರಶ್ನೆ ಸಂದರ್ಭ ಶತಮಾನಗಳ
(ಮೊದಲ ಪುಟದಿಂದ) ಹಿಂದಿನ ವಿಷಯಗಳೆಂದು ವಿವಾದಗಳನ್ನು ಎಳೆದು ತಂದು ತಲಕಾವೇರಿ ಕ್ಷೇತ್ರವನ್ನು ಗೊಂದಲದ ಗೂಡಾಗಿಸಿರುವುದು ವಿಷಾದನೀಯ. ಇದು ಸ್ಥಳೀಯರ ಹಾಗೂ ಭಕ್ತರ ಮನಸ್ಸನ್ನು ನೋಯಿಸಿದೆ ಎಂದು ಅಭಿಪ್ರಾಯಿಸಿದ್ದಾರೆ.
ಗಜಗಿರಿ ಬೆಟ್ಟ ಕುಸಿತ ಹಾಗೂ ಪ್ರಾಣಹಾನಿಗೆ ಬ್ರಹ್ಮಗಿರಿ ಹಾಗೂ ಒತ್ತಿದಂತಿರುವ ಬೆಟ್ಟಗಳಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಸತ್ಯವೂ ಹೌದು. ಇದಕ್ಕೆ ಸಂಬಂಧಿಸಿದಂತೆ ಅವೈಜ್ಞಾನಿಕ ಕಾಮಗಾರಿ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಉನ್ನತಮಟ್ಟದ ತನಿಖೆ ನಡೆಸಲು ಸರಕಾರವನ್ನು ಒತ್ತಾಯಿಸಿರುವ ಬಗ್ಗೆ ನಿಯೋಗ ತೆರಳುವಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ತಲಕಾವೇರಿ ಕ್ಷೇತ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುವುದನ್ನು ಕ್ಷೇತ್ರದ ಪಾವಿತ್ರ್ಯತೆಗೆ ಕುಂದು ಉಂಟು ಮಾಡುವುದನ್ನು ಖಂಡಿಸುತ್ತೇವೆ. ಅಲ್ಲಿ ಬದುಕು ಕಟ್ಟಿಕೊಂಡಿರುವ ಬಡಜನತೆಯ ವ್ಯಾಪಾರ ವಹಿವಾಟುಗಳಿಗೆ ಅಡ್ಡಿ ಉಂಟು ಮಾಡುವುದು ಹಾಗೂ ಗದರಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ; ಸ್ಥಳೀಯರಿಗೆ ಬೆಂಬಲ ನೀಡುತ್ತೇವೆ. ಕಾವೇರಿ ಸರ್ವ ಜನತೆಯ ಆರಾಧ್ಯ ಮಾತೆ; ಈ ತಾಯಿಯ ಕ್ಷೇತ್ರವನ್ನು ಇತಿಹಾಸ ತಿರುಚಲು, ಹಕ್ಕು ಸ್ಥಾಪಿಸಲು ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.
ತಾ.21ರಂದು ಅಖಿಲ ಕೊಡವ ಸಮಾಜ ತಲಕಾವೇರಿ ಕ್ಷೇತ್ರದಲ್ಲಿ ಶತರುದ್ರಾಭಿಷೇಕ ನಡೆಸಲು ಹೊರಟಿರುವುದು ಸಂತೋಷದ ವಿಚಾರ. ಈ ಬಗ್ಗೆ ನಮಗೆ ಆಹ್ವಾನ ಬಂದಿದೆ. ಆದರೆ, ಈ ಪೂಜಾ ಕಾರ್ಯ ಹಮ್ಮಿಕೊಳ್ಳುವ ಮೊದಲು ಕೊಡಗಿನ ಕಾವೇರಿ ಮಾತೆ ಸರ್ವಜನತೆಯ ಆರಾಧ್ಯ ದೇವತೆಯಾಗಿರುವುದರಿಂದ ಎಲ್ಲಾ ಜನಾಂಗಗಳ ಸಭೆ ನಡೆಸಿ ಎಲ್ಲರೊಂದಿಗೆ ಪೂಜಾ ಕಾರ್ಯ ಹಮ್ಮಿಕೊಂಡಿದ್ದರೆ ವಿಶೇಷವೆನಿಸುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗಿನ ಗೌಡರು ಕೊಡಗಿನ ಎಲ್ಲಾ ಜನಾಂಗದವರೊಂದಿಗೆ ಸಾಮರಸ್ಯದಿಂದ ಹೊಂದಿಕೊಂಡು ಬದುಕು ಕಾಣಲು ಇಚ್ಛಿಸುತ್ತೇವೆ. ನಮ್ಮ ತಾಳ್ಮೆ ಹಾಗೂ ಸೌಜನ್ಯತೆಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು; ತಲಕಾವೇರಿ ಪುಣ್ಯಕ್ಷೇತ್ರವನ್ನು ನಾವೆಲ್ಲರೂ ಸೇರಿ ಪವಿತ್ರ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಒಗ್ಗೂಡಿ ಪ್ರಯತ್ನಿಸೋಣ, ಕಾವೇರಿ ಮಾತೆಯ ಕೃಪೆಗೆ ಪಾತ್ರರಾಗೋಣ ಎಂದು ಸಲಹೆ ಮಾಡಿದ್ದಾರೆ.
ಸಭೆಯಲ್ಲಿ ಗಜಗಿರಿ ಬೆಟ್ಟ ಕುಸಿದು ಸಾವನ್ನಪ್ಪಿದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಅರ್ಚಕ ಕುಟುಂಬದ ಐವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.