ಸುಂಟಿಕೊಪ್ಪ, ಸೆ. 17: ಐಗೂರು ಗ್ರಾಮ ಪಂಚಾಯಿತಿ ಸ್ವಚ್ಛಭಾರತ್ ಅಭಿಯಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಎಂಬುದಕ್ಕೆ ತಾಜಾ ಉದಾಹರಣೆ ಲಭ್ಯವಾಗಿದೆ.
ಐಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯಡವಾರೆ, ಕಾಜೂರು, ಸಜ್ಜಳ್ಳಿ, ಹೊರವಾಲೆ ಗ್ರಾಮಸ್ಥರು ಸೋಮವಾರ ಪೇಟೆ, ಮಡಿಕೇರಿ ಕಡೆಗೆ ತೆರಳಲು ರಾಜ್ಯ ಹೆದ್ದಾರಿ ಬಳಿಯಿರುವ ಐಗೂರು ಬಸ್ ತಂಗುದಾಣದಲ್ಲಿ ಬಂದು ನಿಲ್ಲುತ್ತಾರೆ. ಆದರೆ ಬಸ್ ತಂಗುದಾಣದ ಪ್ರವೇಶ ದ್ವಾರದಲ್ಲೇ ಕಾಡು ಗಿಡ, ಗುಂಟೆಗಳು ಬೆಳೆದು ನಿಂತಿದ್ದು, ಸಾರ್ವಜನಿಕರು ಬಸ್ ತಂಗುದಾಣಕ್ಕೆ ತೆರಳಲು ಸಾಧ್ಯವಾಗುವುದಿಲ್ಲ ಐಗೂರು ಗ್ರಾಮ ಪಂಚಾಯಿತಿ ಸಮೀಪದಲ್ಲಿ ವಿಜಯ ಬ್ಯಾಂಕ್ ಬಳಿ ಕಸದತೊಟ್ಟಿ ತುಂಬಿ ತುಳುಕಿದರೂ ಪಂಚಾಯಿತಿಯವರು ಅದರ ಗೋಜಿಗೆ ಹೋಗುವುದಿಲ್ಲ. ಯಾವಾಗಲಾದರೂ ಸ್ಥಳೀಯರು ದೂರು ನೀಡಿದರೆ ಕಸವನ್ನು ತೆಗೆಯುತ್ತಾರೆ. ಸ್ವಚ್ಛ ಗ್ರಾಮದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಇಲ್ಲಿ ವೇಧ್ಯವಾಗಿದೆ.
ಕನಿಷ್ಟ ಕೋವಿಡ್ 19 ಪಾಸಿಟಿವ್ ತಗುಲಿರುವ ಮನೆಗಳಿಗೆ ಸ್ಯಾನಿಟೈಸರ್ ಸಹ ಸಿಂಪಡಣೆ ಮಾಡದೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ತತ್ವಕ್ಕೆ ಅಗೌರವ ಉಂಟು ಮಾಡಿದ್ದಾರೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. - ರಾಜು ರೈ