ಸುಂಟಿಕೊಪ್ಪ, ಸೆ. 17: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದಲ್ಲಿ ಖಾಸಗಿ ತೋಟದ ಮಾಲೀಕರೋರ್ವರು ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಕೆರೆಯ ಜಾಗವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಲಾಯಿತು.

ಲೋಕಾಯುಕ್ತ ಕಾರ್ಯದರ್ಶಿ ಬೆಂಗಳೂರು ಅವರ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರವರ ನಿರ್ದೇಶನದ ಮೇರೆ 7ನೇ ಹೊಸಕೋಟೆ ಗ್ರಾಮದಲ್ಲಿ ಪೈಸಾರಿ ಕೆರೆ ಸ.ಸಂಖ್ಯೆ 3ರ 2.75 ಎಕ್ರೆ ಪೈಕಿ 0.45 ಎಕರೆ, ಸ.ನಂಖ್ಯೆ.44 ರ 0.46 ಎಕರೆ ಪೈಕಿ 0.03 ಎಕರೆ ಮತ್ತು ಸ.ನಂಖ್ಯೆ. 127ರ 0.48 ಎಕರೆ, ಸ.ನಂ. 130ರ 1.02 ಎಕರೆ ಕೆರೆಯನ್ನು ತಾಲೂಕು ಸರ್ವೆದಾರರು ಗುರುತಿಸಿದಂತೆ ಸುಂಟಿಕೊಪ್ಪ ಕಂದಾಯ ಪರಿವೀಕ್ಷಕರಾದ ಕೆ.ಎಚ್.ಶಿವಪ್ಪ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಮಕ್ಷಮದಲ್ಲಿ ವಶಕ್ಕೆ ಪಡೆದು 7ನೇ ಹೊಸಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಸಂಪೂರ್ಣ ಜಾಗವನ್ನು ಅವರ ಹದ್ದುಬಸ್ತಿನಲ್ಲಿರಿಸಿ ಸಂರಕ್ಷಿಸಲು ಹಸ್ತಾಂತರಿಸಿದರು.ಈ ಸಂದರ್ಭ ಗ್ರಾಮ ಲೆಕ್ಕಿಗರಾದ ನಸೀಮ, ಗ್ರಾಮ ಸಹಾಯಕರಾದ ಶಿವಪ್ಪ, ರುದ್ರಕುಮಾರ್, ಗುರು ಪ್ರಸಾದ್ ಇತರರು ಹಾಜರಿದ್ದರು.