ವೀರಾಜಪೇಟೆ, ಸೆ. 17: ವೀರಾಜಪೇಟೆ ತಾಲೂಕು ಅಕ್ರಮ - ಸಕ್ರಮ ಸಮಿತಿಯ ನೂತನ ಕಚೇರಿಯನ್ನು ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ ಉದ್ಘಾಟಿಸಿದರು.
ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಮಾತನಾಡಿ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಗೊಳಿಸಲು ಕಚೇರಿಯ ಅವಶ್ಯಕತೆ ಇದ್ದು ಈಗ ಕಚೇರಿ ಉದ್ಘಾಟನೆಗೊಂಡಿರುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ, ಸ್ಥಳೀಯ ಶಾಸಕರ ಸಲಹೆ ಪಡೆದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ ಸಭೆಯಲ್ಲಿ ಮಾತನಾಡಿದರು. ಅಕ್ರಮ - ಸಕ್ರಮ ಸಮಿತಿಯ ಸದಸ್ಯರಾದ ಲಾಲಾ ಭೀಮಯ್ಯ, ಮಾಪಂಗಡ ಯಮುನಾ ಚಂಗಪ್ಪ ಹಾಗೂ ದಿನೇಶ್ ವೇದಿಕೆಯಲ್ಲಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಆರ್ಎಂಸಿ ನಾಮನಿರ್ದೇಶಕ ಸದಸ್ಯ ಕುಂಬೆಯಂಡ ಗಣೇಶ್, ಮುಖಂಡರಾದ ಮಲ್ಲಂಡ ಮಧು ದೇವಯ್ಯ, ಜೋಕಿಂ ರಾಡ್ರಿಗಸ್, ಚೇಂಬರ್ ಆಫ್ ಕಾಮರ್ಸ್ನ ರವಿ ಉತ್ತಪ್ಪ, ಕಾಶಿ ಕಾವೇರಪ್ಪ, ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ರಘು ಸೋಮಯ್ಯ ಹಾಗೂ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.