ಮಡಿಕೇರಿ, ಸೆ. 17: ತುಳುವೆರ ಜನಪದ ಕೂಟದ ಅಂಗ ಸಂಸ್ಥೆಯಾದ ಜನಪದ ಪತ್ತಿನ ಸಹಕಾರ ಸಂಘದ ಮೊದಲ ಸಭೆ ಗೋಣಿಕೊಪ್ಪದಲ್ಲಿರುವ ಸಂಘದ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕೊಡಗು ಜಿಲ್ಲೆಯಿಂದ ಸದಸ್ಯರಾಗಿ ನೇಮಕಗೊಂಡಿರುವ ಪಿ.ಎಂ. ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಜನಪದ ಪತ್ತಿನ ಸಹಕಾರ ಸಂಘದಲ್ಲಿ ಷೇರು ಬಂಡವಾಳ ಹೂಡಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ತುಳು ಭಾಷಿಕರು ಸೇರಿದಂತೆ ಎಲ್ಲಾ ವರ್ಗದ ಜನತೆ ಷೇರು ಹೂಡಿಕೆ ಮಾಡಲು ಸರ್ವ ನಿರ್ದೇಶಕರು ಒಪ್ಪಿಗೆ ಸೂಚಿಸಿದರು.

ತುಳು ಭಾಷಿಕರ ಶ್ರೇಯೋಭಿವೃದ್ಧಿಗೆ ಜನಪದ ಪತ್ತಿನ ಸಹಕಾರ ಸಂಘದ ಮೂಲಕ ಹೆಚ್ಚು ಪ್ರಾಮುಖ್ಯತೆ ನೀಡುವ ಬಗ್ಗೆ ಚರ್ಚಿಸಲಾಯಿತು.

ಸಹಕಾರ ಸಂಘದ ನಿರ್ದೇಶಕರುಗಳಾದ ಬಿ.ಬಿ. ಐತಪ್ಪ ರೈ, ಕೆ.ಜಿ. ರಾಮಕೃಷ್ಣ, ಬಿ. ಶಿವಪ್ಪ, ಎಸ್.ಎನ್. ರಘು, ಲೀಲಾ ಶೇಷಮ್ಮ, ಬಿ.ಎಸ್. ಪುರುಷೋತ್ತಮ, ಗೌತಮ್ ಶಿವಪ್ಪ, ಎಂ.ಡಿ. ನಾಣಯ್ಯ ಹಾಗೂ ಕೆ.ಪಿ. ಪುರುಷೋತ್ತಮ ಸಭೆಯಲ್ಲಿ ಉಪಸ್ಥಿತರಿದ್ದರು.