ಮಡಿಕೇರಿ, ಸೆ. 17: ರಾಮ ರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ, ಬಿಜೆಪಿಯ ಸ್ಥಾಪಕ ಅಧ್ಯಕ್ಷ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಪ್ರಧಾನಿ ನರೇಂದ್ರಮೋದಿ ಅವರ ಜನ್ಮ ದಿನದ ಪ್ರಯುಕ್ತ ದೇಶವ್ಯಾಪಿ ಬಿಜೆಪಿ ವತಿಯಿಂದ ತಾ. 14 ರಿಂದ ಅ.2 ರವರೆಗೆ ವಿಶಿಷ್ಠ ಕಾರ್ಯಕ್ರಮಗಳು ನಡೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕೂಡ ಸೇವಾ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 17 ರಂದು ಪ್ರಧಾನ ಮಂತ್ರಿಗಳು, ತಾ. 25 ರಂದು ದೀನ್ ದಯಾಳ್ ಹಾಗೂ ಅ. 2 ರಂದು ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆ ನಡೆಯುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.

ಪ್ರಧಾನಮಂತ್ರಿಗಳು 70ನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿರುವ ಹಿನ್ನೆಲೆ ಪ್ರತಿ ಮಂಡಲಗಳಲ್ಲಿ 70 ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳು ಮತ್ತು 70 ಬಡ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡಲಾಗುವುದು. 10 ಆಸ್ಪತ್ರೆ ಮತ್ತು ಬಡ ಕಾಲೋನಿಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಗುವುದು.

ಸ್ಥಳೀಯ ಅವಶ್ಯಕತೆ ಗನುಗುಣವಾಗಿ ಆಸ್ಪತ್ರೆ ಮೂಲಕ ಕೋವಿಡ್ ಪೀಡಿತÀ 70 ವ್ಯಕ್ತಿಗಳಿಗೆ ಹಂತ ಹಂತವಾಗಿ ಪ್ಲಾಸ್ಮಾ ದಾನ ಮಾಡಲಾಗುವುದು. ಯುವ ಮೋರ್ಚಾದ ವತಿಯಿಂದ ರಕ್ತದಾನ ಶಿಬಿರ ನಡೆಸಲಾಗುವುದು. ಪ್ರತೀ ಬೂತ್‍ನಲ್ಲಿ 70 ವೃಕ್ಷಾರೋಪಣ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. 70 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಪ್ಲಾಸ್ಟಿಕ್ ನಿಷೇಧಿಸಲು ಸಂಕಲ್ಪವನ್ನು ತೊಡಲಾಗುವುದು. ಆ ಮೂಲಕ ಸ್ವಚ್ಛ ಭಾರತ್ ಅಭಿಯಾನವನ್ನು ಯಶಸ್ವಿಗೊಳಿಸುವ ಪ್ರಯತ್ನ ಮಾಡಲಾಗುವುದು. ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ಪ್ರಧಾನಮಂತ್ರಿಗಳ ಮಹಾತ್ವಾಕಾಂಕ್ಷೆಯ ಆತ್ಮ ನಿರ್ಭರ ಕಾರ್ಯಕ್ರಮದ ಕುರಿತು ಜನ ಜಾಗೃತಿ ಮೂಡಿಸಲಾಗುವುದು ಎಂದು ರಾಬಿನ್ ದೇವಯ್ಯ ತಿಳಿಸಿದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನವಾದ ಸೆ.25 ರಂದು ಪ್ರತಿ ಬೂತ್ ಮಟ್ಟದಲ್ಲಿ ದಯಾಳ್ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಕ್ಷದ ವಿಚಾರ ಧಾರೆಗಳನ್ನು ಹಂಚಿಕೊಳ್ಳಲಾಗುವುದು ಎಂದರು. ಗಾಂಧಿ ಜಯಂತಿಯ ದಿನವಾದ ಅ.2 ರಂದು ಸ್ವದೇಶಿ, ಸ್ವಭಾಷಾ, ಸರ್ವ ಭೂಷಣ, ಖಾದಿ, ಸ್ವಾವಲಂಬನೆ, ಸರಳತೆ, ಸ್ವಚ್ಛತೆಯ ಕುರಿತು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಮ ರಾಜ್ಯದ ಪರಿಕಲ್ಪನೆ ಹೊಂದಿದ್ದ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡುವ ಪಣ ದೊಂದಿಗೆ ಕಾರ್ಯ ಕ್ರಮಗಳು ನಡೆಯಲಿವೆ ಎಂದು ರಾಬಿನ್ ತಿಳಿಸಿದರು. ಎಲ್ಲಾ ಕಾರ್ಯ ಕ್ರಮಗಳು ಕೋವಿಡ್ ಮಾರ್ಗಸೂಚಿಗೆ ಬದ್ಧವಾಗಿ ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದರು.

ಡ್ರಗ್ಸ್ ಮುಕ್ತ ಭಾರತ: ದೇಶಾದ್ಯಂತ ಡ್ರಗ್ಸ್ ಪಿಡುಗು ವ್ಯಾಪಿಸಿದ್ದು, ಇದರ ವಿರುದ್ಧ ಯುವ ಸಮೂಹವನ್ನು ಜಾಗೃತಗೊಳಿಸುವ ಕಾರ್ಯಕ್ರಮವನ್ನು ಬಿಜೆಪಿ ವತಿಯಿಂದ ಹಮ್ಮಿಕೊಳ್ಳ ಲಾಗಿದೆ. ಡ್ರಗ್ಸ್ ಮುಕ್ತ ಭಾರತ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಬದಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಉಪಾಧ್ಯಕ್ಷ ಅರುಣ್ ಕುಮಾರ್, ನಗರಾಧ್ಯಕ್ಷ ಮನು ಮಂಜುನಾಥ್ ಹಾಗೂ ಮಾಧ್ಯಮ ಪ್ರಮುಖ್ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.