ಸೋಮವಾರಪೇಟೆ, ಸೆ. 17: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದ ಮೇಲ್ಚಾವಣಿ ಮಳೆಗೆ ಸೋರಿಕೆಯಾಗುತ್ತಿದ್ದು, ಸಿಬ್ಬಂದಿಗಳಿಗೆ ಮಳೆ ನೀರು ಹೊರತೆಗೆಯುವದೇ ಕಾಯಕವಾಗಿದೆ.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 3 ಡಯಾಲಿಸಿಸ್ ಬೆಡ್‍ಗಳಿದ್ದು, ಪ್ರತಿ ದಿನವೂ ರೋಗಿಗಳು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಡಯಾಲಿಸಿಸ್ ಘಟಕವನ್ನು ಅತ್ಯಂತ ಶುಚಿಯಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದರೂ ಸಹ, ಮಳೆಯ ನೀರು ಅಶುಚಿತ್ವಕ್ಕೆ ದಾರಿ ಮಾಡಿಕೊಡುತ್ತಿದೆ.

ಘಟಕದ ಮೇಲ್ಚಾವಣಿಯಲ್ಲಿ ಮಳೆಯ ನೀರು ಸೋರಿಕೆಯಾಗಿ ಗೋಡೆಯ ಮೂಲಕ ಇಳಿಯುತ್ತಿರು ವದರಿಂದ ಕೇಂದ್ರದ ಒಳಾಂಗಣ ಅತೀ ಶೀತಕ್ಕೆ ಒಳಗಾಗುತ್ತಿದೆ. ಇದರೊಂದಿಗೆ ನೆಲದಲ್ಲಿ ಮಳೆ ನೀರು ನಿಲುಗಡೆ ಯಾಗುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪ ಕರಣಗಳನ್ನು ರಕ್ಷಿಸಿಕೊಳ್ಳಲು ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.

ಮಳೆಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ನೀರನ್ನು ಬಕೆಟ್‍ಗಳಲ್ಲಿ ಶೇಖರಿಸಿ ಹೊರಹಾಕಬೇಕಿದೆ. ಯಥೇಚ್ಛ ಪ್ರಮಾಣದಲ್ಲಿ ನೀರು ಘಟಕದ ಒಳಗೆ ಬರುತ್ತಿದೆ. ಇದರಿಂದಾಗಿ ಡಯಾಲಿಸಿಸ್ ಘಟಕದ ನಿರ್ವಹಣೆ ಕಷ್ಟಸಾಧ್ಯ ವಾಗುತ್ತಿದೆ ಎಂದು ಸಿಬ್ಬಂದಿಗಳು ಅಳಲುತೋಡಿ ಕೊಂಡಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಕ್ರಮ: ಡಯಾಲಿಸಿಸ್ ಘಟಕದ ಅವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದ್ದಾರೆ. ಅನ್ಯ ಕಾರ್ಯ ನಿಮಿತ್ತ ಆಸ್ಪತ್ರೆಗೆ ಆಗಮಿಸಿದ್ದ ಶಾಸಕರನ್ನು ಸಮಸ್ಯೆಯ ಬಗ್ಗೆ ಗಮನ ಸೆಳೆದ ಸಂದರ್ಭ, ಖುದ್ದು ಛಾವಣಿಯನ್ನು ಪರಿಶೀಲಿಸಿದ ಶಾಸಕರು, ತಕ್ಷಣ ಛಾವಣಿಯ ಮೇಲ್ಬಾಗ ಶೀಟ್‍ಗಳನ್ನು ಅಳವಡಿಸಿ, ಮಳೆ ನೀರು ಸೋರಿಕೆಯಾಗದಂತೆ ಕ್ರಮವಹಿಸಲು ಸಂಬಂಧಿಸಿದ ಇಲಾಖೆಯ ಅಭಿಯಂತರರಿಗೆ ದೂರವಾಣಿ ಮೂಲಕ ಸೂಚಿಸಿದರು.