ಗೋಣಿಕೊಪ್ಪ ವರದಿ, ಸೆ. 17: ಗ್ರಾಮೀಣ ಮಟ್ಟದ ಮಕ್ಕಳಿಗೆ ಪೋಷಕಾಂಶ ಆಹಾರ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು.
ಗುರುವಾರ ಕೃಷಿ ವಿಜ್ಞಾನ ಕೇಂದ್ರ, ಇಫ್ಕೊ, ವೀರಾಜಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕೆವಿಕೆ ಸಭಾಂಗಣದಲ್ಲಿ ಪೋಷಣಾ ಅಭಿಯಾನ ಮತ್ತು ರೈತರ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕ ಪೋಷಕಾಂಶಯುಕ್ತ ಆಹಾರ ತಲುಪಿಸಲು ಪ್ರಧಾನಿ ನರೇಂದ್ರಮೋದಿ ಚಿಂತನೆಯಂತೆ ಪೋಷಣಾ ಅಭಿಯಾನ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುತ್ತಿದೆ. ಇದನ್ನು ಗ್ರಾಮೀಣ ಮಟ್ಟದ ಮಕ್ಕಳಿಗೆ ತಲುಪಿಸಲು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ. ಮಕ್ಕಳಿಗೆ ತಲುಪಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ತರಕಾರಿ ಬೆಳೆಗೆ ಬೇಕಾದ ಜಾಗವನ್ನು ಬಳಸಿಕೊಂಡು ಪೋಷಕಾಂಶವುಳ್ಳ ಆಹಾರ ಬೆಳೆಯಲು ಮುಂದಾಗಬೇಕಿದೆ. ಇದರಿಂದ ಅಂಗವೈಕಲ್ಯತೆಯನ್ನು ತೊಡೆದು ಹಾಕಲು ಕೂಡ ಸಹಕಾರಿಯಾಗಲಿದೆ. ಎಲ್ಲರ ಸಹಭಾಗಿತ್ವದಿಂದ ಈಗಾಗಲೇ ಪೋಲಿಯೋ ಕೂಡ ನಿರ್ಮೂಲನೆಯಾಗಿದೆ. ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಪ್ರಪಂಚದಲ್ಲಿ ಬಲಿಷ್ಠ ಭಾರತ ಎಂದು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಮಹತ್ವದ್ದು. ಸ್ವಾಭಿಮಾನಿ ಭಾರತವಾಗಿ ದೇಶ ಮುನ್ನಡೆಯುತ್ತಿದೆ. ಶತ್ರು ರಾಷ್ಟ್ರ ಚೀನಾ ವಿರುದ್ಧ ಶಸ್ತ್ರಾಸ್ತ ಬಳಸದೆ ಯುದ್ಧ ಗೆದ್ದ ಸಂಭ್ರಮಕ್ಕೆ ಕಾರಣವಾಗಿರುವ ಮೋದಿ ಅವರ ಹುಟ್ಟುಹಬ್ಬ ನಮಗೆಲ್ಲಾ ವಿಶೇಷ ದಿನವಾಗಿದೆ ಎಂದು ಅವರು ಈ ಸಂದರ್ಭ ಹೇಳಿದರು.
ಕೆವಿಕೆ ಮುಖ್ಯಸ್ಥ ಡಾ. ಸಾಜುಜಾರ್ಜ್ ಮಾತನಾಡಿ, ಪೋಷಕಾಂಶ ಅಹಾರ ಸೇವನೆಯಿಂದ ಕೊರೊನಾದಂತಹ ಹೆಮ್ಮಾರಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಮಕ್ಕಳಲ್ಲಿ ನೈರ್ಮಲ್ಯ, ಆರೋಗ್ಯ ಕಾಪಾಡಲು ಇದರಿಂದ ಸಹಕಾರಿಯಾಗಲಿದೆ. ಹಲವು ಬಣ್ಣದ ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ಹೆಚ್ಚು ಪೋಷಕಾಂಶ ದೊರೆಯಲಿದೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತರು ಹಾಗೂ ರೈತರಿಗೆ ತರಕಾರಿ ಬೀಜ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕೆವಿಕೆ ತಜ್ಞರಾದ ಡಾ. ಸುರೇಶ್, ಸಹನಾ ಹೆಗ್ಡೆ, ಡಾ. ದೇವಯ್ಯ ಇದ್ದರು.