ಮಡಿಕೇರಿ, ಸೆ. 17: ಜಾಗತಿಕ ಕೊರೊನಾ ಸೋಂಕು ನಡುವೆ ಕಳೆದ ಆರು ತಿಂಗಳಿನಿಂದ ಅಂತರ್ಜಾಲದ ಮೂಲಕ ಮನೆಪಾಠಕ್ಕೆ ಸೀಮಿತ ಗೊಂಡಿರುವ ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜು ವಿದ್ಯಾರ್ಥಿಗಳು ಇದೇ ತಾ. 21 ರಿಂದ ತಮ್ಮ ಪೋಷಕರ ಒಪ್ಪಿಗೆ ಪತ್ರದೊಂದಿಗೆ ತಮ್ಮ ಶಾಲಾ-ಕಾಲೇಜು ಬೋಧಕರನ್ನು ಸಂಪರ್ಕಿಸಿ ನೇರ ಭೇಟಿ ಮೂಲಕ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು. ಈ ಅಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಖಚಿತಪಡಿಸಿದ್ದಾರೆ. ತಾ. 21 ರಿಂದ ಶಾಲೆಗಳು ಪ್ರಾರಂಭಗೊಳ್ಳುವ ಕುರಿತು ‘ಶಕ್ತಿ’ ಸಂದರ್ಶಿಸಿದಾಗ ಅವರು ಈ ಬಗ್ಗೆ ಮಾಹಿತಿ ನೀಡಿದರು. ಅವರ ಪ್ರಕಾರ ಶಾಲೆಗಳು ಎಂದಿನಂತೆ ಆರಂಭಗೊಳ್ಳುವುದಿಲ್ಲ; ಮಾತ್ರವಲ್ಲದೆ ವಿದ್ಯಾರ್ಥಿಗಳು ನಿತ್ಯ ತರಗತಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಾಗಿಲ್ಲ.

ಸಂಪರ್ಕ ಸೇತುವೆ: ಬದಲಾಗಿ 9 ಮತ್ತು 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮಾತ್ರ ತಮ್ಮ ಪೋಷಕರಿಂದ ಲಿಖಿತ ಅನುಮತಿ ಪತ್ರದೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ತಮಗೆ ಸಂಶಯವಿರುವ ಪಠ್ಯಕ್ರಮಗಳ ಕುರಿತು ಆಯ ವಿಷಯ ಶಿಕ್ಷಕರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಸರಕಾರದ ನಿಯಮದಂತೆ ಕೊರೊನಾ ಸೋಂಕಿನ ನಿರ್ಬಂಧ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡು ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಂಪರ್ಕ ಸೇತುವೆ ಕಲ್ಪಿಸಲಾಗಿದೆ.

ಈಗಾಗಲೇ ಆನ್‍ಲೈನ್ ಅಥವಾ ಮನೆ ಪಾಠದಲ್ಲಿ ತೊಡಗಿರುವ ಶಾಲಾ ಶಿಕ್ಷಕರು ಮತ್ತು ಮಕ್ಕಳಿಗೆ ಈ ವ್ಯವಸ್ಥೆಯಿಂದ ಮುಖಾಮುಖಿ ಭೇಟಿಗೆ ಅವಕಾಶದೊಂದಿಗೆ, ಇನ್ನಷ್ಟು ಕಲಿಕೆಯಲ್ಲಿ ಸುಧಾರಣೆ ಕಂಡುಕೊಳ್ಳಲು ಈ ಯೋಜನೆ ಸಹಕಾರಿ ಆಗಲಿದೆ ಎಂದು ಮಚ್ಚಾಡೋ ಅಭಿಪ್ರಾಯಪಟ್ಟಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಈ ನಡುವೆ ತಾ. 21 ರಿಂದ 28ರ ತನಕ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ (ಸಪ್ಲಿಮೆಂಟರಿ) ಜಿಲ್ಲೆಯ 5 ಕೇಂದ್ರಗಳಲ್ಲಿ ನಡೆಯಲಿದ್ದು, ಸುಮಾರು 1200 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಈ ಮಕ್ಕಳಿಗೆ ಕೊರೊನಾ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಕೊರೊನಾ ಸೋಂಕು ಇತ್ಯಾದಿ ಸುಳಿವಿದ್ದರೆ; ಮುಂಚಿತವಾಗಿ ಪರೀಕ್ಷಾ ಕೇಂದ್ರ ಪ್ರಮುಖರಿಗೆ ಮಾಹಿತಿ ನೀಡಿದರೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದಾಗಿಯೂ ಅಧಿಕಾರಿ ತಿಳಿಸಿದ್ದಾರೆ.