ಸಿದ್ದಾಪುರ, ಸೆ. 17: ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಭತ್ತದ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಗತ್ತೂರು ಗ್ರಾಮದಲ್ಲಿ ಗದ್ದೆ ಕೃಷಿ ಮಾಡಿದ ಹಲವಾರು ಮಂದಿ ಕೃಷಿಕರ ಕೃಷಿ ಮಾಡಿದ ಗದ್ದೆಗಳಿಗೆ ಕಾಡಾನೆಗಳ ಹಿಂಡುಗಳು ಲಗ್ಗೆಯಿಟ್ಟು ಮನಬಂದಂತೆ ತುಳಿದು ಬೆಳೆಗಳನ್ನು ತಿಂದು ನಾಶಗೊಳಿಸಿದೆ. ತ್ಯಾಗತ್ತೂರು ಗ್ರಾಮದ ನಿವಾಸಿಗಳಾದ ಬಿ.ಕೆ ಪ್ರವೀಣ್, ಜಿ.ಯು ಜೀವನ್, ಮುಂಡ್ರುಮನೆ ರಾಜಣ್ಣ, ಹೆಚ್.ಎಸ್. ವಿನು, ಬಿ.ಪಿ. ಜಗದೀಶ್, ಬಿ.ಪಿ. ಮಲ್ಲಿಗೆರವರಿಗೆ ಸೇರಿದ ಕೃಷಿ ಮಾಡಿದ ಗದ್ದೆಗಳಿಗೆ ಎರಡು ಮರಿ ಆನೆಗಳು ಸೇರಿದಂತೆ ಹತ್ತಕ್ಕೂ ಅಧಿಕ ಕಾಡಾನೆಗಳ ಹಿಂಡುಗಳು ಕೃಷಿ ಗದ್ದೆಗಳಿಗೆ ಲಗ್ಗೆಯಿಟ್ಟು ಮನಬಂದಂತೆ ಓಡಾಡಿದೆ. ಅಲ್ಲದೇ ಕೃಷಿ ಮಾಡಿದ ಭತ್ತದ ಬೆಳೆಗಳನ್ನು ತಿಂದು ನಾಶ ಗೊಳಿಸಿ ಧ್ವಂಸಗೊಳಿಸಿದೆ. ಕಾಡಾನೆಗಳ ದಾಳಿಗೆ ಸಿಲುಕಿ ಕೃಷಿಕರಿಗೆ ಅಪಾರ ನಷ್ಟ ಸಂಭವಿಸಿದೆ ಎಂದು ಕೃಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗೆ ವಾಲ್ನೂರು-ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದ್ದರು. ಆದರೆ ಇದೀಗ ಮತ್ತೆ ಕಾಡಾನೆಗಳು ಮರಳಿ ನಾಡಿಗೆ ಲಗ್ಗೆಯಿಟ್ಟಿದೆ. ಅಭ್ಯತ್‍ಮಂಗಲ, ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಮಿತಿ ಮೀರಿದ ಕಾಡಾನೆಗಳ ಹಾವಳಿಯಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ರೈಲ್ವೇ ಬ್ಯಾರಿಗೇಡ್‍ಗಳನ್ನು ಅಳವಡಿಸುವ ಕಾಮಗಾರಿಯು ನಡೆಯುತ್ತಿದೆ.

ಆದರೆ ತ್ಯಾಗತ್ತೂರು ಗ್ರಾಮಗಳಲ್ಲಿ ರೈಲ್ವೇ ಬ್ಯಾರಿಗೇಡ್ ಕಾಮಗಾರಿಯು ಸಮರ್ಪಕವಾಗಿ ನಡೆಯದೇ ಕಾಡಾನೆಗಳ ಹಾವಳಿ ತೀವ್ರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯು ಗಮನಹರಿಸಿ ತ್ಯಾಗತ್ತೂರು ಗ್ರಾಮದಲ್ಲಿ ಬಿಟ್ಟು ಹೋಗಿರುವ ಜಾಗದಲ್ಲಿ ಕೂಡಲೇ ರೈಲ್ವೇ ಬ್ಯಾರಿಗೇಡ್‍ಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ರೀತಿಯ ಕ್ರಮ ಕೈಗೊಳ್ಳ ಬೇಕೆಂದು ತಪ್ಪಿದ್ದಲ್ಲಿ ಗ್ರಾಮಸ್ಥರು ಸೇರಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.