ಮಡಿಕೇರಿ, ಸೆ. 16: ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಕೊಡಗು ಸೇರಿದಂತೆ ಮೆಗಾ ಇ-ಲೋಕ ಅದಾಲತ್ ಮುಖಾಂತರ ನ್ಯಾಯಾಂಗ ಇಲಾಖೆಯಿಂದ ಅನೇಕ ವ್ಯಾಜ್ಯಗಳನ್ನು ರಾಜೀ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಗುತ್ತಿದೆ; ಕೊರೊನಾ ನಡುವೆ ಕಕ್ಷಿದಾರರು ನೇರವಾಗಿ ನ್ಯಾಯಾಂಗ ಕಲಾಪಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲದ ಸಂದರ್ಭ ‘ಮೆಗಾ ಇ-ಲೋಕ ಅದಾಲತ್’ ವ್ಯವಸ್ಥೆಯಡಿ ಈ ಅವಕಾಶವನ್ನು ಸದುಪಯೋಗಮಾಡಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಅವರು ಕರೆ ನೀಡಿದ್ದಾರೆ. ಈ ಅವಕಾಶವನ್ನು ಗ್ರಾಮೀಣ ಜನರು ಹಾಗೂ ವಿವಿಧ ಪ್ರಕರಣದಲ್ಲಿ ನ್ಯಾಯಾಂಗದ ವ್ಯಾಪ್ತಿಯಲ್ಲಿ ರಾಜೀ ಇತ್ಯರ್ಥ ಬಯಸುವವರು ನೇರವಾಗಿ ಅಂತರ್ಜಾಲ ಅಥವಾ ದೂರವಾಣಿಯಲ್ಲಿ ಸಂಪರ್ಕಿಸಲು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತಾ. 19 ರಂದು ಮೆಗಾ ಇ-ಲೋಕ ಅದಾಲತ್ ಜರುಗಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಿದ್ದು, ಕಕ್ಷಿದಾರರು ಈ ಅವಕಾಶ ಬಳಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಕೋರಿದ್ದಾರೆ.ಜಿಲ್ಲಾ ನ್ಯಾಯಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್, ವೀಡಿಯೋ ಕಾನ್ಫರೆನ್ಸ್,

(ಮೊದಲ ಪುಟದಿಂದ) ಎಸ್‍ಎಂಎಸ್, ವಾಟ್ಸ್‍ಆ್ಯಪ್, ಎಲೆಕ್ಟ್ರಿಕ್ ಮೋಡ್ ಮೂಲಕ ಸಂಪರ್ಕಿಸಿ ನ್ಯಾಯಾಲಯ ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿ ಸುಮಾರು 16,200 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದ್ದು, ಇದರಲ್ಲಿ 2,200 ರಷ್ಟು ರಾಜಿ ಅಥವಾ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಕಾನೂನು ಸೇವಾ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೆಗಾ ಇ-ಲೋಕ ಅದಾಲತ್ ಆಯೋಜಿಸಲಾಗಿದ್ದು, ರಾಜಿ ಅಥವಾ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಳ್ಳಲು ಅವಕಾಶವಿದೆ. ತಾ.18ರೊಳಗೆ ಇ-ಲೋಕ ಅದಾಲತ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕೋವಿಡ್-19 ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಲೋಕ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ತಾ.19 ರಂದು ದೇಶದಲ್ಲಿಯೇ ಪ್ರಥಮ ಬಾರಿಗೆ ಆನ್‍ಲೈನ್ ಮೂಲಕ ಪ್ರಕರಣಗಳನ್ನು ದಾಖಲಿಸಿಕೊಂಡು ಇತ್ಯರ್ಥಪಡಿಸಲು ಅವಕಾಶವಿದೆ. ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವ ಉದ್ದೇಶದಿಂದ ಇ-ಲೋಕ ಅದಾಲತ್ ನಡೆಯಲಿದೆ ಎಂದರು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರ ಸಹಾಯವಾಣಿ ಸಂಖ್ಯೆ: 1800-425-90900 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯದ ಆವರಣ ಮಡಿಕೇರಿ ದೂ.ಸಂ.08272-222373, ಇ-ಮೇಲ್ : ಜಟsಚಿmಚಿಜiಞeಡಿi@gmಚಿiಟ.ಛಿomನ್ನು ಸಂಪರ್ಕಿಸಬಹುದಾಗಿದೆ.ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಅವರು ಇದ್ದರು.