ಚಳಿಗಾಲದಲ್ಲೂ ಶತ್ರು ಸೇನೆಯನ್ನು ಎದುರಿಸಲಿದ್ದೇವೆ

ನವದೆಹಲಿ, ಸೆ.16 : ಪೂರ್ವ ಲಡಾಖ್ ನಲ್ಲಿ ಚೀನಾ ಯುದ್ಧದ ಅನಿವಾರ್ಯತೆ ಸೃಷ್ಟಿಸಿದರೆ ಸೇನೆ ಸಮರಕ್ಕೂ ಸರ್ವ ಸನ್ನದ್ಧ ಸ್ಥಿತಿಯಲ್ಲಿದ್ದೂ ಚಳಿಗಾಲದಲ್ಲೂ ಸಮರ್ಥವಾಗಿ ಶತ್ರು ಸೇನೆಯನ್ನು ಎದುರಿಸಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ. ಭಾರತೀಯ ಸೇನೆ ಪೂರ್ಣ ಪ್ರಮಾಣದ ಯುದ್ಧ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ. ಯಾವ ಸಂದರ್ಭದಲ್ಲೂ ಚೀನಾ ಸೇನೆ ಯುದ್ಧಕ್ಕೆ ಮುಂದಾದರೆ ಅದಕ್ಕೆ ಭಾರತೀಯ ಸೇನೆ ಸಹ ಹೋರಾಡಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ. ಚಳಿಗಾಲದಲ್ಲಿ ಯುದ್ಧ ನಡೆಸುವಷ್ಟು ಸಾಮಥ್ರ್ಯ ಭಾರತೀಯ ಸೇನೆಗಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಾ ಪಡೆಯ ಯೋಧರು ಬಹುತೇಕ ನಗರ ಪ್ರದೇಶದವರಾಗಿದ್ದು ಯುದ್ಧ ಭೂಮಿಯ ಕಷ್ಟಕರ ಸನ್ನಿವೇಶ ಹಾಗೂ ದೀರ್ಘಕಾಲದ ಹೋರಾಟ ಅವರಿಗೆ ಅಭ್ಯಾಸವಿಲ್ಲ ಎಂದು ಹೇಳಿದೆ. ಪೂರ್ವ ಲಡಾಖ್ ವಲಯದಲ್ಲಿ ಚಳಿಗಾಲದಲ್ಲೂ ಭಾರತೀಯ ಸೇನೆ ಚೀನಾಗಿಂತಲೂ ಸಮರ್ಥವಾಗಿ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುವಷ್ಟು ಸಾಮಥ್ರ್ಯವಿದೆ ಎಂದು ಸೇನೆ ಗುಡುಗಿದೆ.

ಸಂಸದರ ವೇತನದಲ್ಲಿ ಶೇ.30ರಷ್ಟು ಕಡಿತ

ನವದೆಹಲಿ, ಸೆ.16 : ಕೋವಿಡ್ ಹಾವಳಿಯಿಂದ ಉಂಟಾಗಿರುವ ಹಣಕಾಸು ಬಿಕ್ಕಟ್ಟು ನಿಭಾಯಿಸಲು ಸಂಸದರ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ತಿದ್ದುಪಡಿ ವಿಧೇಯಕ್ಕೆ ಮಂಗಳವಾರ ಲೋಕಸಭೆ ಅನುಮೋದನೆ ನೀಡಿದೆ. ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ವಿಧೇಯವನ್ನು ಸೋಮವಾರ ಕೆಳಮನೆಯಲ್ಲಿ ಮಂಡಿಸಲಾಗಿತ್ತು. ವೇತನ ಕಡಿತಕ್ಕೆ ಸಂಬಂಧಿಸಿದಂತೆ ಈ ಮೊದಲು ಜಾರಿಗೊಳಿಸಲಾಗಿದ್ದ ಸುಗ್ರೀವಾಜ್ಞೆಗೆ ಇದು ಪರ್ಯಾಯವಾಗಲಿದೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ 2020-21, 2021-22ನೇ ಸಾಲಿಗೆ ಸ್ಥಗಿತಗೊಳಿಸಲಾಗುವುದು. ಇದು ಎರಡು ವರ್ಷಕ್ಕೆ ಸೀಮಿತವಾಗಿರುವ ತಾತ್ಕಾಲಿಕ ವ್ಯವಸ್ಥೆ ಎಂದು ಅವರು ಸ್ಪಷ್ಟಪಡಿಸಿದರು. ವೇತನ ಕಡಿತ ಸಂಬಂಧ ಕೇಂದ್ರ ಸರಕಾರವು ಏ.6ರಂದೇ ಸುಗ್ರೀವಾಜ್ಞೆ ಹೊರಡಿಸಿದೆ.

ಇಂದು ಸಿಎಂ ಬಿಎಸ್‍ವೈ ದೆಹಲಿ ಭೇಟಿ

ಬೆಂಗಳೂರು, ಸೆ.16 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ದಿಢೀರ್ ದೆಹಲಿಗೆ ತೆರಳುತ್ತಿದ್ದಾರೆ. ಯಡಿಯೂರಪ್ಪ ಅವರು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಮುಖಾಮುಖಿ ಭೇಟಿಯಾಗಿ ಸಂಪುಟ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಪ್ರವಾಹ ಪರಿಹಾರ ನಿರ್ವಹಣೆಗೆ ಸಿಎಂ ಕೇಂದ್ರದಿಂದ 8 ಸಾವಿರ ಕೋಟಿ ಅನುದಾನ ಕೋರಿದ್ದರು, ಆದರೆ ಕೇಂದ್ರ ಸರ್ಕಾರ ಅದರಲ್ಲಿ ಕೇವಲ ಶೇ.10 ರಷ್ಟು ಮಾತ್ರ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿಎಂ ಹೆಚ್ಚಿನ ಅನುದಾನ ಕೋರುವುದರ ಜೊತೆಗೆ ಕಳೆದ ವರ್ಷದಿಂದ ಉಂಟಾದ ಪ್ರವಾಹ ಹಾನಿಯ ಸಂಬಂಧವು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಅಧಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ

ಯಾದಗಿರಿ, ಸೆ.16 : ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿರುವುದು ಪೂರ್ವ ನಿಗದಿತ ಕಾರ್ಯಕ್ರಮ ಹಾಗೂ ಅತಿವೃಷ್ಟಿ ಪರಿಹಾರ ಪಡೆಯುವ ಬಗ್ಗೆ ಚರ್ಚಿಸಲು. ಈ ನಡುವೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೆರೆ ಪರಿಹಾರಕ್ಕಾಗಿ ಸಿಎಂ ನಾಳೆ ದೆಹಲಿಗೆ ಹೋಗಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಭೇಟಿಗೆ ಸಮಯ ಕೇಳಿದ್ದಾರೆ. ಸದ್ಯ ಎರಡನೇ ಕಂತಿನಲ್ಲಿ 395 ಕೋಟಿ ಕೊಟ್ಟಿದ್ದು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ ಎಂದರು.

ಸೆ.30 ಕ್ಕೆ ಬಾಬ್ರಿ ಮಸೀದಿ ಧ್ವಂಸ ತೀರ್ಪು

ಲಖನೌ, ಸೆ.16 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಸೆ.30 ರಂದು ಪ್ರಕಟಿಸಲಿದ್ದು, ಅಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ನ್ಯಾಯಾಧೀಶ ಎಸ್.ಕೆ. ಯಾದವ್ ಅವರು 28 ವರ್ಷಗಳ ಹಳೆಯ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆಪ್ಟೆಂಬರ್ 30ಕ್ಕೆ ಪ್ರಕಟಿಸುವುದಾಗಿ ಬುಧವಾರ ತಿಳಿಸಿದ್ದು, ಅಂದು ಎಲ್ಲಾ 32 ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ. ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿ ನಾಯಕರಾದ ಎಂ ಎಂ.ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗೂ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸೆ.1 ರಂದು ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ನಂತರ ವಿಶೇಷ ನ್ಯಾಯಾಧೀಶರು ತೀರ್ಪು ಬರೆಯಲು ಪ್ರಾರಂಭಿಸಿದರು ಎಂದು ಸಿಬಿಐ ವಕೀಲ ಲಲಿತ್ ಸಿಂಗ್ ತಿಳಿಸಿದ್ದಾರೆ.

100 ಮಿಲಿಯನ್ ಡೋಸ್ ಲಸಿಕೆ ಒಪ್ಪಂದ

ಮಾಸ್ಕೋ, ಸೆ.16 : ಭಾರತಕ್ಕೆ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ ಪೂರೈಸಲು ರಷ್ಯಾ ಒಪ್ಪಿಕೊಂಡಿದ್ದು, ಈ ಸಂಬಂಧ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ರಷ್ಯಾದ ನೇರ ಹೂಡಿಕೆ ನಿಧಿ(ಆರ್‍ಡಿಐಎಫ್) ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳು ಮತ್ತು ಸ್ಪುಟ್ನಿಕ್ ವಿ ಲಸಿಕೆ ವಿತರಣೆ ಒಪ್ಪಂದ ಮಾಡಿಕೊಂಡಿದೆ. ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ರೆಡ್ಡೀಸ್ ಲ್ಯಾಬೊರೇಟರಿಗೆ ಸ್ಪುಟ್ನಿಕ್ ವಿ ಲಸಿಕೆಯ 100 ಮಿಲಿಯನ್ ಡೋಸ್‍ಗಳನ್ನು ನೀಡುವುದಾಗಿ ತಿಳಿಸಿದೆ. ಭಾರತದಲ್ಲಿ ಸ್ಪುಟ್ನಿಕ್ ವಿ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಲಾಗಿದ್ದು, ಶೀಘ್ರದಲ್ಲೇ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯಲಿದೆ. ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿಯ ಮೂರನೇ ಹಂತದ ಪ್ರಯೋಗ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ನಡೆಯಲಿದೆ. ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆ ಹೋರಾಡಲಿದೆ ಎನ್ನುವ ನಂಬಿಕೆ ಇದೆ ಎಂದು ಡಾ. ರೆಡ್ಡೀಸ್ ಕೋ ಚೇರ್ಮನ್ ಮತ್ತು ವ್ಯವಸ್ಥಾಪನ ನಿರ್ದೇಶಕ ಜಿ.ವಿ. ಪ್ರಸಾದ್ ಅವರು ಹೇಳಿದ್ದಾರೆ.

ಪಾಕ್ ದಾಳಿಗೆ ಯೋಧ ಹುತಾತ್ಮ

ರಜೌರಿ, ಸೆ.16 : ಜಮ್ಮು ಮತ್ತು ಕಾಶ್ಮೀರದ ಸುಂದರ್ಬನಿ ಸೆಕ್ಟರ್'ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ. ಸುಂದರ್ಬನಿ ಸೆಕ್ಟರ್ ಬಳಿ ಪಾಕಿಸ್ತಾನ ನಿನ್ನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಯಕ್ ಅನೀಶ್ ಥೋಮಸ್ ಎಂಬ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಯೋಧ ಹುತಾತ್ಮರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ಉತ್ತರ ನೀಡುತ್ತಿದೆ, ನಾಯಕ್ ಅನೀಶ್ ಅತ್ಯಂತ ವೀರ ಯೋಧರಾಗಿದ್ದು, ಇತರರಿಗೆ ಪ್ರೇರಣೆಯಾಗಿದ್ದರು. ಅವರ ತ್ಯಾಗವನ್ನು ದೇಶ ಸದಾಕಾಲ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ದೋಣಿ ಮಗುಚಿ 6 ಸಾವು

ಜೈಪುರ, ಸೆ.16 : ರಾಜಸ್ಥಾನದಲ್ಲಿ ಪ್ರಯಾಣಿಕರ ದೋಣಿ ಮಗುಚಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಟ 6 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ಇಂದು ಬೆಳಗ್ಗೆ ಪ್ರಯಾಣಿಕ ದೋಣಿ ಮಗುಚಿ ಬಿದ್ದು ಆರು ಜನರು ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ 30ಕ್ಕೂ ಹೆಚ್ಚು ಗ್ರಾಮಸ್ಥರು ಒಂದು ದಂಡೆಯಿಂದ ಇನ್ನೊಂದು ದಡಕ್ಕೆ ದೋಣಿಯ ಮೂಲಕ ದಾಟುತ್ತಿದ್ದರು. ಕೆಲವು ಜನರು ತಮ್ಮ ಮೋಟಾರ್ ಸೈಕಲ್‍ಗಳನ್ನು ದೋಣಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದೋಣಿ ಜನರ ಭಾರಕ್ಕೆ ಮುಗುಚಿಕೊಂಡಿದೆ. ಈ ವೇಳೆ ಹಲವರು ಈಜಿ ದಡ ಸೇರುವ ಪ್ರಯತ್ನ ಮಾಡಿದರು. ಇನ್ನೂ ಹಲವರು ಈಜಲಾಗದೇ ಮುಳುಗಿದ್ದಾರೆ ಎನ್ನಲಾಗಿದೆ.