ಮಡಿಕೇರಿ, ಸೆ.15 : ವೀರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ವಿದೆ ಎಂದು ಆರೋಪಿಸಿರುವ ಸಂಘದ ನಿರ್ದೇಶಕರುಗಳಾದ ಡಿ.ಐ.ವೇಜಾಸ್ ಹಾಗೂ ಪಿ.ಹನೀಫ್, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವ್ಯವಹಾರದಲ್ಲಿ ಭಾಗಿಯಾಗಿ ರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು.ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕರು ಸರಿಯಾದ ಲೆಕ್ಕ ಪತ್ರಗಳನ್ನು ಮಂಡಿಸುತ್ತಿಲ್ಲ. ಅವ್ಯವಹಾರದ ಬಗ್ಗೆ ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗೆ (ಮೊದಲ ಪುಟದಿಂದ) ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಸಂಘ ಹೆಚ್ಚು ಬಡ್ಡಿಯ ಆಮಿಷವೊಡ್ಡಿದ ಪರಿಣಾಮ ದೊಡ್ಡ ಮೊತ್ತದ ನಿರಖು ಠೇವಣಿ ಇಟ್ಟವರಿಗೆ ಅಸಲು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಇಷ್ಟೆಲ್ಲ ಗೊಂದಲದ ನಡುವೆಯೂ ಸಂಘ ಲಾಭದಲ್ಲಿದೆ ಎಂದು ಆಡಳಿತ ಮಂಡಳಿ ವರದಿ ನೀಡುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ಲೆಕ್ಕಪತ್ರ ಪರಿಶೋಧನೆ ನಡೆಸಿ ತನಿಖೆಗೆ ಒಳಪಡಿಸಬೇಕು ಎಂದು ಡಿ.ಐ.ವೇಜಾಸ್ ಹಾಗೂ ಪಿ.ಹನೀಫ್ ಒತ್ತಾಯಿಸಿದರು.

ಆತಂಕ ಪಡಬೇಕಾಗಿಲ್ಲ

ವೀರಾಜಪೇಟೆ ಮುಸ್ಲಿಂ ಸಹಕಾರ ಸಂಘದ ಬಗ್ಗೆ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಹೇಳಿಕೆಗಳು ಪ್ರಚಾರಗೊಳ್ಳುತ್ತಿದ್ದು, ಸಂಘದ ಆಡಿಟ್ ಹಾಗೂ ತನಿಖಾ ವಿಚಾರಣೆ ನಡೆಯುತ್ತಿದೆ. ಇದರ ನಂತರ ಸಂಘದ ಲಾಭ ನಷ್ಟದ ವಾಸ್ತವಾಂಶ ಗ್ರಾಹಕರಿಗೆ ತಿಳಿಯುತ್ತದೆ. ಎಲ್ಲ ಠೇವಣಿದಾರರಿಗೂ ಅವರ ಖಾತೆಯಲ್ಲಿರುವ ನಗದು ಹಣ ಪಾವತಿ ಮಾಡಲಾಗುವುದು. ಯಾವ ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿಯ ಪರವಾಗಿ ಸಂಘದ ಪ್ರಭಾರ ಅಧ್ಯಕ್ಷ ಕೆ. ಝಬೇರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಝಬೇರ್ ಅವರು 88 ವರ್ಷಗಳ ಇತಿಹಾಸ ಹೊಂದಿರುವ ಸಂಘದಲ್ಲಿ ಸಣ್ಣಪುಟ್ಟ ಲೋಪ ದೋಷ ಕಂಡುಬಂದಿದೆಯಾದರೂ ಇದು ತನಿಖೆಯಿಂದ ಹೊರಬರಲಿದೆ. ಆಡಳಿತ ಮಂಡಳಿಯ ನಿರ್ದೇಶಕ ಎಸ್.ಎಚ್.ಮೈನುದ್ದೀನ್ ಸಂಘದ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ. ಅವರ ವಿರುದ್ಧ ಕೆಲವರು ಆಧಾರ ರಹಿತವಾಗಿ ಆರೋಪ ಮಾಡುವುದು ಸರಿಯಲ್ಲ, ಸಂಘದ ಅಭಿವೃದ್ಧಿಗೆ ಸಹಕರಿಸಿದ ಬ್ಯಾಂಕಿನ ಸದಸ್ಯರು ಹಾಗೂ ಸದಸ್ಯರಲ್ಲದವರು ಯಾವುದೇ ರೀತಿಯಲ್ಲಿ ವಿಚಲಿತರಾಗವುದು ಬೇಡ. ಎಲ್ಲರ ಹಣವನ್ನು ಗ್ರಾಹಕರಿಗೆ ಹಂತ ಹಂತವಾಗಿ ತಾರತಮ್ಯವಿಲ್ಲದೆ ಹಿಂತಿರುಗಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಎ.ಕೆ.ಝುಬಿಯುಲ್ಲಾ, ಎನ್.ಕೆ.ನಜೀಬ್, ಮೊಹಮ್ಮದ್ ಶೋಯೆಬ್, ಅಬ್ಬು ಸಾಲೀ ಹಾಗೂ ತಸ್ಲೀಮಾ ಅಕ್ತಾರ್ ಉಪಸ್ಥಿತರಿದ್ದರು.